ಅನರ್ಹರಿಗೆ ಯಶಸ್ವಿನಿ ಕಾರ್ಡ್: ಇಬ್ಬರ ಸೆರೆ

ಕೃಷಿ ಸಹಕಾರಿ ಸಂಘದ ಸದಸ್ಯರಾಗಿರುವ ರೈತರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ ಯೋಜನೆಯ ಕಾರ್ಡ್ಗಳನ್ನು ಅನರ್ಹರಿಗೆ ವಿತರಿಸುತ್ತಿದ್ದ ಜಾಲ ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ಸಹಕಾರ ಸಂಘದ ಕಾರ್ಯದರ್ಶಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ...
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೃಷಿ ಸಹಕಾರಿ ಸಂಘದ ಸದಸ್ಯರಾಗಿರುವ ರೈತರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ ಯೋಜನೆಯ ಕಾರ್ಡ್ಗಳನ್ನು ಅನರ್ಹರಿಗೆ ವಿತರಿಸುತ್ತಿದ್ದ ಜಾಲ ಪತ್ತೆ  ಮಾಡಿರುವ ಸಿಸಿಬಿ ಪೊಲೀಸರು ಸಹಕಾರ ಸಂಘದ ಕಾರ್ಯದರ್ಶಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಚಿಕ್ಕತೋಗೂರು ಗೇಟ್ ನಿವಾಸಿ ರಾಧಾಕೃಷ್ಣ (62) ಹಾಗೂ ಆನೇಕಲ್ ತಾಲೂಕು ಸಮಂದೂರು ಗ್ರಾಮದ ಮುರುಗೇಶ (31) ಬಂಧಿತರು. ಸಿಸಿಬಿ ಪೊಲೀಸರ ತಂಡ ನಕಲಿ ಕಾರ್ಡ್  ಮಾಡಿಸಿಕೊಳ್ಳುವವರ ಸೋಗಿನಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಹಕಾರ ಇಲಾಖೆ ಯಿಂದ ಸಹಕಾರ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ್‍ಗಳನ್ನು ಅರ್ಹ ರೈತರಿಗೆ ವಿತರಿಸುತ್ತಿದೆ. ಆದರೆ, ಈ ಕಾರ್ಡ್‍ಗಳನ್ನು ಅನರ್ಹರಿಗೆ ಪೂರೈಕೆ ಮಾಡುತ್ತಿರುವ ಮಾಹಿತಿ ಇತ್ತು. ಈ ಹಿನ್ನಲೆಯಲ್ಲಿ  ಸಿಸಿಬಿ ಅಧಿಕಾರಿಗಳ ತಂಡ ಎಲೆಕ್ಟ್ರಾನಿಕ್ ಸಿಟಿ ಚಿಕ್ಕತೋಗೂರು ಗೇಟ್ 3ನೇ  ಕ್ರಾಸ್ ತಿಮ್ಮೇಗೌಡ ಬಿಲ್ಡಂಗ್‍ನ ಮನೆಯೊಂದರ ಮೇಲೆ ದಾಳಿ ನಡೆಸಿ ನಕಲಿ ಯಶಸ್ವಿನಿ ಕಾರ್ಡ್ ಸೃಷ್ಟಿಸಿ ಹೆಚ್ಚಿನ ಹಣ ಪಡೆದು ಅನರ್ಹರಿಗೆ ವಿತರಿಸುತ್ತಿದ್ದ ರಾಧಾಕೃಷ್ಣನನ್ನು ಬಂಧಿಸಿದ್ದರು.

ರು.45 ಸಾವಿರಕ್ಕೆ ಮಾರಾಟ
ಬಂಧಿತ ರಾಧಾಕೃಷ್ಣ, ಆನೇಕಲ್ ತಾಲೂಕಿನ ಹೆನ್ನಾಗರ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್, ಕಾಚಾನಾಯಕನಹಳ್ಳಿಯ ಕಾರ್ಯದರ್ಶಿ ಮುರಗೇಶ್ ಎಂಬಾತನಿಂದ ಖಾಲಿ ಯಶಸ್ವಿನಿ  ಕಾರ್ಡ್‍ಗಳನ್ನು ಪಡೆಯುತ್ತಿದ್ದ. ಪಡೆದ ಕಾರ್ಡ್‍ಗಳನ್ನು ಯಶಸ್ವಿನಿ ಕಾರ್ಡ್ ವ್ಯಾಪ್ತಿಗೆ ಬಾರದ ಜನರಿಗೆ ರು.4 ರಿಂದ ರು.5 ಸಾವಿರಕ್ಕೆ ಮಾರುತ್ತಿದ್ದ. ನಿಯಮ ಪಾಲಿಸದೆ ಹೆಚ್ಚಿನ ಹಣ ನೀಡುವವರಿಗೆ ಯಶಸ್ವಿನಿ ಕಾರ್ಡ್ ನಲ್ಲಿ ಅವರ ಭಾವಚಿತ್ರ ಅಂಟಿಸಿ ಹೆಸರು ಸೇರಿದಂತೆ ಇತರ ವಿವರಗಳನ್ನು ಬರೆದು ನಕಲಿಯಾಗಿ ತಯಾರಿಸಿಕೊಂಡಿದ್ದ ಬ್ಯಾಂಕಿನ ಮೊಹರು ಹಾಕಿ ನೈಜ ಕಾರ್ಡ್‍ಗಳಂತೆ  ಆರೋಪಿಗಳು ವಿತರಿಸುತ್ತಿದ್ದರು. ಯಶಸ್ವಿನಿ ಕಾರ್ಡ್ ಪಡೆಯುವ ಅರ್ಹರಿಗೆ ಸರ್ಕಾರ ವಾರ್ಷಿಕ ಶುಲ್ಕ ರು.750 ನಿಗದಿಪಡಿಸಿದೆ. ಆರೋಪಿಗಳು ಈ ಮೊತ್ತವನ್ನು ಹೆನ್ನಾಗರ ಸಹಕಾರ ಸಂಘಕ್ಕೆ vಪಾವತಿಸಿ ಉಳಿದ ಹಣವನ್ನು ಹಂಚಿಕೊಳ್ಳುತ್ತಿದ್ದರು.

ನಕಲಿ ದಾಖಲೆಗಳು ಸರ್ಕಾರಕ್ಕೆ
ಸಹಕಾರಿ ಸಂಘದ ಕಾರ್ಯದರ್ಶಿ ಮುರುಗೇಶ, ಅನರ್ಹರ ಹೆಸರಿನ ವಿವರಗಳನ್ನು ತಮ್ಮ ಸಂಘದ ವ್ಯಾಪ್ತಿಯಲ್ಲಿ ವಾಸವಿರುವವರೆಂದು ಸುಳ್ಳು ವಿಳಾಸ ಸೇರಿದಂತೆ ವಿವಿಧ ದಾಖಲೆಗಳನ್ನು  ಬರೆದು ಯಶಸ್ವಿನಿ ಕಾರ್ಡ್‍ಗಳ ಮುಖ್ಯ ಕಚೇರಿಗೆ ಕಳುಹಿಸುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ. ಆರೋಪಿಗಳಿಂದ ಅನರ್ಹರಿಗೆ ವಿತರಿಸಲು ಇಟ್ಟುಕೊಂಡಿದ್ದ ಖಾಲಿ ಯಶಸ್ವಿನಿ ಕಾಡ್ರ್ ಗಳು, ವಿಳಾಸ ಮತ್ತು ಭಾವಚಿತ್ರ ಇರುವ ಯಶಸ್ವಿನಿ ಕಾರ್ಡ್‍ಗಳು, ಮೂರು ವಿವಿಧ ಬ್ಯಾಂಕ್ ನಾಮಾಂಕಿತದ ರಬ್ಬರ್ ಸ್ಟ್ಯಾಂಪ್‍ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನರ್ಹರಿಗೆ 500 ಕಾರ್ಡ್ ವಿತರಣೆ
ಆರೋಪಿಗಳು ನಕಲಿ ಕಾರ್ಡ್ ವಿತರಿಸಲೆಂದು ನಕಲಿ ರಬ್ಬರ್ ಸ್ಟ್ಯಾಂಪ್ ಗಳನ್ನು ಮಾಡಿಸಿಟ್ಟುಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಸುಮಾರು 400ರಿಂದ 500 ಜನ ಅನರ್ಹರಿಗೆ  ಯಶಸ್ವಿನಿ ಕಾರ್ಡ್‍ಗಳನ್ನು ವಿತರಿಸಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾರೆ.

ಎಷ್ಟು ಅನರ್ಹರು ಈ ಕಾರ್ಡ್‍ಗಳ ಫಲಾನುಭವಿಗಳು ಎನ್ನುವುದು ತನಿಖೆಯಲ್ಲಿ ತಿಳಿಯಲಿದೆ. ಅಲ್ಲದೇ ಯಶಸ್ವಿನಿ ಕಾರ್ಡ್‍ಗಳ ವಿತರಣೆ ಬಗ್ಗೆ ಮತ್ತಷ್ಟು ಸುರಕ್ಷತಾ ಕ್ರಮಗಳು ಕೈಗೊಳ್ಳುವಂತೆ  ಯಶಸ್ವಿನಿ ಟ್ರಸ್ಟ್ ಗೆ ಪತ್ರ ಬರೆಯಲಾಗುವುದು.
-ರಮೇಶ್ ಡಿಸಿಪಿ ಸಿಸಿಬಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com