
ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಸಿಎಂ ಜಯಲಲಿತಾ ಅವರ ಆಗ್ರಹಕ್ಕೆ ಖಡಕ್ ಆಗಿ ಉತ್ತರ ನೀಡಿರುವ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕರ್ನಾಟಕ ಸರ್ಕಾರ ಬಾಕಿ ಉಳಿಸಿಕೊಂಡಿರುವ 27ಟಿಎಂಸಿ ನೀರನ್ನು ಕೂಡಲೇ ಬಿಡಬೇಕು ಎಂದು ಆಗ್ರಹಿಸಿ ತಮಿಳುನಾಡು ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಪತ್ರವೊಂದನ್ನು ಬರೆದಿತ್ತು. ಇದಕ್ಕೆ ಉತ್ತರಿಸಿರುವ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಪ್ರಸ್ತುತ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಅವರಿಗೆ ಪತ್ರವೊಂದನ್ನು ಬರೆದಿರುವ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು, ಒಪ್ಪಂದದಂತೆ ತಮಿಳುನಾಡಿಗೆ ಬಿಡಬೇಕಾದಷ್ಟು ನೀರನ್ನು ಬಿಟ್ಟಿದ್ದೇವೆ. ಆದರೆ ಈ ಬಾರಿ ಕರ್ನಾಟಕದಲ್ಲೂ ಮಳೆ ಅಭಾವ, ಬರಗಾಲ. ರಾಜ್ಯದ ಹಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಈ ಹಿಂದೆ ಕರ್ನಾಟಕ ಬಾಕಿ 27ಟಿಎಂಸಿ ಕಾವೇರಿ ನೀರು ಬಿಡಬೇಕೆಂದು ಆಗ್ರಹಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ಪತ್ರ ಬರೆದು ಒತ್ತಾಯಿಸಿದ್ದರು.
Advertisement