
ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಅನಗತ್ಯ ವಿಳಂಬವಾಗುತ್ತಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ರಾಜ್ಯ ಸರ್ಕಾರ ರಾಜಕೀಯ ಇಚ್ಛಾ ಶಕ್ತಿ ತೋರುತ್ತಿಲ್ಲ ಎಂದು ಕುಮಾರಮಂಗಳಂ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದ್ದರು. ಇದಾದ ಮರುದಿನವೇ ರಾಜ ಭವನಕ್ಕೆ ತೆರಳಿ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು ಶ್ರೀಗಳಿಗೆ ಲಭಿಸಿರುವ ನಿರೀಕ್ಷಣಾ ಜಾಮೀನು ರದ್ಧತಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆನೀಡುವಂತೆ ಆಗ್ರಹಿಸಿದ್ದಾರೆ. ಇದರೊಂದಿಗೆ ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಸರ್ಕಾರ ಮೃಧು ಧೋರಣೆ ತೋರುತ್ತಿದೆ ಎಂಬ ಸಾರ್ವಜನಿಕ ಆರೋಪಕ್ಕೆ ಈಗ ಬಲಬಂದಂತಾಗಿದ್ದು, ಪ್ರಕರಣ ಈಗ ರಾಜಭವನದವರೆಗೆ ಬಂದಿದೆ. ಆದಾಗ್ಯೂ ಸಿಐಡಿ ಪೊಲೀಸರ ದಿವ್ಯ ಮೌನ ಮಾತ್ರ ಮುಂದುವರಿದಿದೆ.
ಮತ್ತೆ ಪರೀಕ್ಷೆ ಬೇಡ ಎಂದ ಸ್ವಾಮೀಜಿ
ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಹಾಜರಾಗಲು ಸಿಐಡಿ ನೀಡಿರುವ ನೋಟಿಸ್ ರದ್ದು ಕೋರಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಸಂಬಂಧ ಪರೀಕ್ಷೆಗಾಗಿ ಸೆ.30ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಹಾಜರಾಗಬೇಕು ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ಸೂಚಿಸಿ ಸಿಐಡಿ ಉಪ ಪೊಲೀಸ್ ಅಧೀಕ್ಷಕರು ಸೆ.21ರಂದು ನೋಟಿಸ್ ಜಾರಿ ಮಾಡಿದ್ದರು. ಈ ಅರ್ಜಿಯು ಸೆ.26ರಂದು ನ್ಯಾ.ಎಲ್. ನಾರಾಯಣ ಸ್ವಾಮಿ ಅವರ ಏಕಸದಸ್ಯ ಪೀಠದ ಎದುರು ವಿಚಾರಣೆಗೆ ಬರಲಿದೆ.
ರಾಮಕಥಾ ಗಾಯಕಿ ಅತ್ಯಾಚಾರ ಆರೋಪ ಸಂಬಂಧ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸೂಚಿಸಿ ರಾಘವೇಶ್ವರ ಭಾರತಿಗೆ ಕಳೆದ ವರ್ಷ ನೋಟಿಸ್ ನೀಡಿದ್ದರು. ಈ ನೋಟಿಸ್ ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸೂಚಿಸಿತ್ತು. ಅದರಂತೆ ಸ್ವಾಮೀಜಿ 2014ರ ಡಿ.5ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾದರೂ ವೀರ್ಯ ಪರೀಕ್ಷೆಗೆ ನಿರಾಕರಿಸಿದ್ದರು.ಇದರಿಂದ ಸಿಐಡಿ ಪೊಲೀಸರು ಸೆ.21ರಂದು ಪರೀಕ್ಷೆಗೆ ಹಾಜರಾಗಲು ಮತ್ತೊಮ್ಮೆ ಸ್ವಾಮೀಜಿಗೆನೋಟಿಸ್ ನೀಡಿದ್ದಾರೆ. ಈ ನೋಟಿಸ್ ಅನ್ನೂ ಸ್ವಾಮೀಜಿ ಹೈಕೋರ್ಟ್‍ನಲ್ಲಿ ಇದೀಗ ಪ್ರಶ್ನಿಸಿದ್ದಾರೆ.
ರಾಘವೇಶ್ವರ ಶ್ರೀಗಳ ವಿರುದ್ಧ ಸರ್ಕಾರ ಆರೋಪ ಪಟ್ಟಿ ಸಲ್ಲಿಸಬೇಕು. ಸ್ವಾಮಿಗಳ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸರ್ಕಾರ ಬಡವರಿಗೆ ಒಂದು ನ್ಯಾಯ. ಪ್ರಬಲರಿಗೆ ಒಂದು ನ್ಯಾಯ ಎಂಬಂತೆ ವರ್ತಿಸಬಾರದು. ಕಾನೂನು ಪ್ರಕಾರ ರಾಘವೇಶ್ವರ ಶ್ರೀಗಳನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಬೇಕು.
-ಎಚ್.ವಿಶ್ವನಾಥ್ ಮಾಜಿ ಸಂಸದ
ರಾಜ್ಯ ಮಹಿಳಾ ಆಯೋಗಕ್ಕೂ ದೂರು
ಪ್ರೇಮಲತಾ ದಿವಾಕರ್ ಅವರು ರಾಘವೇಶ್ವರ ಶ್ರೀ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಅತ್ಯಾಚಾರ ದೂರು ನೀಡಿದ್ದರಿಂದ ಸಮಾಜದ ಜನತೆಯನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿರುವ ಶ್ರೀಗಳನ್ನು ಬಂಧಿಸಿ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಸ್ವಾಮಿ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಪೊಲೀಸರು ಕಾನೂನಿನಂತೆ ಕ್ರಮ ಕೈಗೊಂಡಿದ್ದಾರೆ. ತಪ್ಪು ಮಾಡಿದವರನ್ನು ನಮ್ಮ ಸರ್ಕಾರ ರಕ್ಷಿಸಲ್ಲ.
-ಸಿದ್ದರಾಮಯ್ಯ ಸಿಎಂ
ತನಿಖೆ ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂಬುದು ನನ್ನ ಆಸೆ. ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಈ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ನನ್ನನ್ನು ಕಳೆದ ಬಾರಿ ಬಂದಾಗಲೂ ಭೇಟಿಯಾಗಿದ್ದರು. ಪ್ರಕರಣದ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ.
-ಟಿ.ಬಿ.ಜಯಚಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ
Advertisement