ರಾಜ್ಯದಲ್ಲಿ ಇನ್ನೂ ಕಾಡಲಿದೆ ಕಗ್ಗತ್ತಲ ಛಾಯೆ

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಶುಕ್ರವಾರದಿಂದ ಮತ್ತಷ್ಟು ಬಿಗಡಾಯಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ, ನಗರ ಪ್ರದೇಶಗಳಲ್ಲಿ 1ಗಂಟೆ ಅನಿಯಮಿತ ಲೋಡ್ ಶೆಡ್ಡಿಂಗ್ ಹೇರಲಾಗಿದೆ...
ಕಗ್ಗತಲೆಯತ್ತ ಕರ್ನಾಟಕ (ಸಂಗ್ರಹ ಚಿತ್ರ)
ಕಗ್ಗತಲೆಯತ್ತ ಕರ್ನಾಟಕ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಶುಕ್ರವಾರದಿಂದ ಮತ್ತಷ್ಟು ಬಿಗಡಾಯಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ, ನಗರ ಪ್ರದೇಶಗಳಲ್ಲಿ 1ಗಂಟೆ ಅನಿಯಮಿತ ಲೋಡ್ ಶೆಡ್ಡಿಂಗ್  ಹೇರಲಾಗಿದೆ.

ಎಲ್ಲಾ ಮೂಲಗಳಿಂದ ಸದ್ಯ 5500 ಮೆ.ವ್ಯಾ.ವರೆಗೂ ವಿದ್ಯುತ್ ಲಭ್ಯವಾಗುತ್ತಿದೆ. ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳೂ ಚೆನ್ನಾಗಿರುವವರೆಗೂ ಪರಿಸ್ಥಿತಿ ನಿಭಾಯಿಸಬಹುದಾಗಿದೆ. ಆದರೆ ದಿಢೀರ್ ದುರಸ್ತಿಗೆ ಒಳಗಾಗುವ ಉಷ್ಣ ವಿದ್ಯುತ್ ಸ್ಥಾವರಗಳು ತಾಂತ್ರಿಕ ಕಾರಣಗಳಿಗೆ ಕೈಕೊಟ್ಟರೆ ಸಮಸ್ಯೆ ತೀವ್ರವಾಗಿ ರಾಜ್ಯದಲ್ಲಿ ಕತ್ತಲು ಕವಿಯಲಿದೆ. ಈ ಮಧ್ಯೆ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದ್ದ ಜಲ  ವಿದ್ಯುತ್ ಉತ್ಪಾದನೆ ಶನಿವಾರದಿಂದ ಸ್ಥಗಿತವಾಗುವ ಸಾಧ್ಯತೆ ಇದೆ.ಇದರಿಂದ ಲೋಡ್ ಶೆಡ್ಡಿಂಗ್ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಶೆಡ್ಯೂಲ್ಡ್ ಬದಲು ಅನ್‍ಶೆಡ್ಯೂಲ್ಡ್
ವಾರದ ಹಿಂದೆ ಬೆಸ್ಕಾಂ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ದಿನಕ್ಕೆ 4 ಗಂಟೆ, ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶಕ್ಕೆ ನಿತ್ಯ 2ಗಂಟೆ ಲೋಡ್‍ಶೆಡ್ಡಿಂಗ್ ಮಾಡುವುದಾಗಿ ಇಂಧನ ಸಚಿವ  ಡಿ.ಕೆ.ಶಿವಕುಮಾರ್ ಘೋಷಿಸಿದ್ದರು. ಹಾಗೆಯೇ ಇತರೆ ಎಸ್ಕಾಂಗಳಲ್ಲಿಯೂ ಸಮಯ ನಿಗದಿ ಮಾಡಲಾಗುವುದು ಎಂದೂ ಹೇಳಿದ್ದರು. ಆದರೆ ಕೇಂದ್ರ ವಿದ್ಯುತ್ ಸ್ಥಾವರ ಮತ್ತು ಕೈ ಕೊಟ್ಟಿದ್ದ  ಯುಪಿಸಿಎಲ್‍ನಿಂದ 1500 ಮೆ.ವ್ಯಾಟ್ ವಿದ್ಯುತ್ ಲಭಿಸಿದ ನಂತರ ಬೆಸ್ಕಾಂ ವ್ಯಾಪ್ತಿಯಲ್ಲಿ ಬಹುತೇಕ ಲೋಡ್‍ಶೆಡ್ಡಿಂಗ್ ರದ್ದು ಗೊಳಿಸಿತ್ತು. ಆದರೆ ಇತರೆ ಎಸ್ಕಾಂಗಳ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ಘೋಷಣೆ ಮಾಡಲೇ ಇಲ್ಲ.

ಜಲಾಶಯಗಳಲ್ಲಿ ಶೇ.37ರಷ್ಟು ನೀರು
ಜಲ ವಿದ್ಯುತ್ ಸ್ಥಾವರಗಳಲ್ಲಿ ಸದ್ಯ ಉತ್ಪಾದನೆ ಕಡಿಮೆಗೊಳಿಸಲಾಗಿದ್ದು, ಮುಂದಿನ ಬೇಸಿಗೆಯಲ್ಲಿ ಉಂಟಾಗುವ ಕ್ಷಾಮ ನಿಭಾಯಿಸಲು ಕಾಯ್ದಿರಿಸಲಾಗಿದೆ. ಆದರೂ ತೀರಾ ತುರ್ತು  ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಂದರೆ ಸಾಮಾನ್ಯ ಸಂದರ್ಭದಲ್ಲಿ 1700 ಮೆ. ವ್ಯಾ. ವರೆಗೂ ಉತ್ಪಾದಿಸುವ ಜಲವಿದ್ಯುತ್ ಅನ್ನು ಈಗ ಬರೀ 300ಮೆ.ವ್ಯಾ.ಗೆ  ಸೀಮಿತಗೊಳಿಸಲಾಗಿದೆ. ಜಲವಿದ್ಯುತ್ ಸ್ಥಾವರಗಳಿರುವ ಶರಾವತಿ, ವರಾಹಿ, ಸೂಪಾ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಶೇ.37ರಷ್ಟು ಮಾತ್ರ ಇದೆ.

ವಿದ್ಯುತ್ ನೀಡಲು ಕೇಂದ್ರಕ್ಕೆ ಡಿಕೆಶಿ ಆಗ್ರಹ
ಬೆಂಗಳೂರು:
ರಾಜ್ಯದ ವಿದ್ಯುತ್ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಭರವಸೆ ನೀಡಿದಂತೆ ಕೇಂದ್ರ ಗ್ರಿಡ್‍ನಿಂದ ತಕ್ಷಣ 1,000 ಮೆ.ವ್ಯಾ. ವಿದ್ಯುತ್ ನೀಡಬೇಕೆಂದು ಇಂಧನ  ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್, ಮಳೆ ಕೊರತೆ ಹಾಗೂ ಶಾಖೊತ್ಪನ್ನ  ಮೂಲದ ವಿದ್ಯುತ್ ಸರಬರಾಜಿನಲ್ಲಿ ಕೊರತೆಯುಂಟಾಗಿರುವ ಹಿನ್ನಲೆಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟ ವಿದ್ಯುತ್ ಕಡಿತ ಮಾಡುವ ಅನಿವಾರ್ಯತೆ ತಲೆದೋರಿದೆ ಎಂದಿದ್ದಾರೆ.

ಎಲ್ಲಾ ಸಾಧ್ಯತೆಗಳನ್ನು ಪತ್ತೆ ಹಚ್ಚಿ ವಿದ್ಯುತ್ ಹೊಂದಾಣಿಕೆ ಮಾಡಿ ಪೂರೈಸಲಾಗುತ್ತಿದೆ. ಆದ್ದರಿಂದ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂದೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿ ಸಮಸ್ಯೆ ಹೆಚ್ಚಾದರೆ ಏನೂ ಮಾಡಲು ಸಾಧ್ಯವಿಲ್ಲ.
-ಮಂಜುನಾಥ್ ರಾಜ್ಯ ವಿದ್ಯುತ್ ಪ್ರಸರಣ
ನಿಗಮದ ಮುಖ್ಯ ಎಂಜಿನಿಯರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com