ಮತ್ತೆ ಶಾಕ್ ನೀಡಿದ ಪಿಯು ಮಂಡಳಿ: ಮರು ಪರೀಕ್ಷೆಯಲ್ಲಿ ಹಳೆಯ ಪ್ರಶ್ನೆ ಪತ್ರಿಕೆ ಬಳಕೆ!

ಪಿಯು ಮಂಡಳಿಯ ಮತ್ತೊಂದು ಯಡವಟ್ಟು ಬಯಲಾಗಿದ್ದು, ಮಾರ್ಚ್ 31ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಈ ಹಿಂದಿನ ವರ್ಷಗಳಲ್ಲಿ ಬಳಕೆಯಾಗಿದ್ದ ಹಳೆಯ ಪ್ರಶ್ನೆ ಪತ್ರಿಕೆ ಎಂಬ ವಿಚಾರ ಬೆಳಕಿಗೆ ಬಂದಿದೆ..
ಪಿಯು ಶಿಕ್ಷಣ ಮಂಡಳಿ ಮತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
ಪಿಯು ಶಿಕ್ಷಣ ಮಂಡಳಿ ಮತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

ಬೆಂಗಳೂರು: ಸತತ 2ನೇ ಬಾರಿಗೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಮೂಲಕ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾನ ಹರಾಜಾಗಿತ್ತು. ಇದೀಗ ಮತ್ತೆ ಪಿಯು ಮಂಡಳಿಯ ಮತ್ತೊಂದು ಯಡವಟ್ಟು ಬಯಲಾಗಿದ್ದು, ಮಾರ್ಚ್ 31ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಈ ಹಿಂದಿನ ವರ್ಷಗಳಲ್ಲಿ ಬಳಕೆಯಾಗಿದ್ದ ಹಳೆಯ  ಪ್ರಶ್ನೆ ಪತ್ರಿಕೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಶಿಕ್ಷಣ ಇಲಾಖೆಯ ನಂಬಲಾರ್ಹ ಮೂಲಗಳು ತಿಳಿಸಿರುವಂತೆ ಮಾರ್ಚ್ 21ರ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಸರ್ಕಾರ ಮತ್ತು ಪಿಯು ಶಿಕ್ಷಣ ಇಲಾಖೆ ಹೊಸ ಪ್ರಶ್ನೆ  ಪತ್ರಿಕೆಯನ್ನು ಸಿದ್ಧಪಡಿಸುವ ಗೋಜಿಗೇ ಹೋಗಿಲ್ಲ. ಬದಲಿಗೆ ಹಳೆಯ ವರ್ಷದ ಪ್ರಶ್ನೆ ಪತ್ರಿಕೆಯ ಮತ್ತದೇ ಹಳೆ ಮುದ್ರಣಾಲಯದಲ್ಲಿ ಮುದ್ರಿಸಿತ್ತು ಎಂದು ತಿಳಿದುಬಂದಿದೆ. ಹಳೆಯ ವರ್ಷದ ಕೆಲ  ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡ ಅಧಿಕಾರಿಗಳು ಅದರಲ್ಲಿ ಒಂದಷ್ಟು ಸೆಟ್ ಗಳ ಪ್ರಶ್ನೆ ಪತ್ರಿಕೆಯನ್ನು ಮರು ಮುದ್ರಣ ಹಾಕಿಸಿದ್ದಾರೆ.

ಶಿಕ್ಷಣ ಮಂಡಳಿ ಪ್ರತಿಯೊಂದು ಪರೀಕ್ಷೆಗೂ ಮೂರು ವಿಧದ ಪ್ರಶ್ನೆ ಪತ್ರಿಕೆಗಳ ಸೆಟ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಶಿಕ್ಷಣ ಇಲಾಖೆ 6 ವಿಧದ ಪ್ರಶ್ನೆ ಪ್ರಕಿಗಳನ್ನು  ಸಿದ್ದಪಡಿಸಿಕೊಂಡು ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಮುಂದಾಗಿತ್ತು. ಆದರೆ ಮಾರ್ಚ್ 20ರ ರಾತ್ರಿ ಈ ಪ್ರಶ್ನೆ ಪತ್ರಿಕೆ ಕೂಡ ಸೋರಿಕೆಯಾಗುವ ಮೂಲಕ ಇಲಾಖೆಯನ್ನೇ ಬೆಚ್ಚಿ ಬೀಳಿಸಿತ್ತು.  ಹೀಗಾಗಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಿದ್ದ ಶಿಕ್ಷಣ ಇಲಾಖೆ ನೂತನ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮತ್ತು ವಿಷಯ ತಜ್ಞರಿಗೆ ಸೂಚನೆ ನೀಡಿತ್ತು.

ಆದರೆ ಹೊಸ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ಗೋಜಿಗೆ ಹೋಗದ ಅಧಿಕಾರಿಗಳು ತಮ್ಮ ಖಜಾನೆಯಲ್ಲಿದ್ದ ಹಳೆಯ ಪ್ರಶ್ನೆ ಪತ್ರಿಕೆಯೊಂದರ ಸೆಟ್ ಅನ್ನು ತೆಗೆದುಕೊಂಡು ಮರು ಮುದ್ರಣ  ಮಾಡಿಸಿದ್ದಾರೆ. ಈ ವಿಚಾರ ತಿಳಿದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯ ಮತ್ತು ಅಧಿಕಾರಿಗಳು ಪರಸ್ಪರ ಶಾಮೀಲಾಗಿ 2ನೇ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಸಾಧ್ಯತೆಗಳಿವೆ.

2 ವಾರಗಳ ಮುಂಚಿತವಾಗಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸುವ ಅವಶ್ಯಕತೆ ಏನಿತ್ತು..?
ಅಧಿಕಾರಿಗಳ ಯಡವಟ್ಟು ಇಷ್ಟಕ್ಕೇ ನಿಲ್ಲುವುದಿಲ್ಲ. ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮತ್ತೆ ಸೋರಿಕೆಯಾಗದಂತೆ  ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಸರ್ಕಾರ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸುವ ಮುದ್ರಣಾಲಯವನ್ನು ಗೌಪ್ಯವಾಗಿಡುತ್ತದೆ. ಅಲ್ಲಿ ಮುದ್ರಣವಾಗುವ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ  ಆರಂಭವಾಗುವ 4 ಅಥವಾ 5 ದಿನಗಳ ಮುಂಚಿತವಾಗಿ ಸಾಕಷ್ಟು ಭದ್ರತೆಯೊಂದಿಗೆ ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಭದ್ರತೆಯ ನಡುವೆ ಇಡಲಾಗುತ್ತದೆ. ಆದರೆ ಈ ಬಾರಿ ಮಾತ್ರ ಶಿಕ್ಷಣ  ಇಲಾಖೆಯ ಅಧಿಕಾರಿಗಳು ಬರೊಬ್ಬರಿ 2 ವಾರಗಳ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣಾಲಯದಿಂದ ಖಜಾನೆ ರವಾನೆ ಮಾಡಿದ್ದರು. ಇದು ಇದೀಗ ಶಂಕೆಗೆ ಕಾರಣವಾಗುತ್ತಿದ್ದು, 5  ದಿನಗಳ ಮುಂಚಿತವಾಗಿ ರವಾನಿಸಬೇಕಿದ್ದ ಪ್ರಶ್ನೆ ಪತ್ರಿಕೆಗಳನ್ನು ಬರೊಬ್ಬರಿ 2 ವಾರಗಳ ಮುಂಚಿಕವಾಗಿ ರವಾನೆ ಮಾಡುವ ಅವಶ್ಯಕತೆಯಾದರೂ ಏನಿತ್ತು..?

ಮಾರ್ಚ್ 21ರಂದು ನಿಗದಿಯಾಗಿದ್ದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮಾರ್ಚ್ 31ಕ್ಕೆ ಮುದೂಡಲಾಗಿತ್ತು. ಆದರೆ ಮಾರ್ಚ್ 30ರ ರಾತ್ರಿ ಮತ್ತೆ 2ನೇ ಬಾರಿಗೆ ಅದೂ  ಕೂಡ 10 ದಿನಗಳ ಅಂತರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇದೀಗ ಮತ್ತೆ ರಸಾಯನಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆಯ ಸೋರಿಕೆಯಲ್ಲಿ ಟ್ಯೂಷನ್ ಮಾಫಿಯಾದ  ಕೆಲವರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಕೆಲ ಪ್ರಭಾವಿ ಪೋಷಕರು ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಆಘಾತಕಾರಿ ಅಂಶವೆಂದರೆ ಸ್ವತಃ ಪಿಯು ವಿದ್ಯಾರ್ಥಿಗಳೇ ಪ್ರಶ್ನೆ  ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅಂಶಕೂಡ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com