ನವದೆಹಲಿ: ಭಾರತದಲ್ಲಿ ಈ ಬಾರಿ ಭೀಕರ ಬರಗಾಲ ಬಂದಿದೆ. ಹೆಚ್ಚುತ್ತಿರುವ ಧಗೆ, ಜಲಕ್ಷಾಮದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಬರಗಾಲದಿಂದ ಕಂಗೆಟ್ಟಿರುವ ದೇಶದ ಸದ್ಯದ ಪರಿಸ್ಥಿತಿ ಏನು ಎಂಬುದು ಕೆಳಗೆ ನೀಡಲಾಗಿರುವ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತಿದೆ.
33,00,00,000 ಮಂದಿ ಬರ ಪೀಡಿತರು
ಭಾರತದಲ್ಲಿ ಹತ್ತು ರಾಜ್ಯಗಳನ್ನು ಬರಪೀಡಿತ ರಾಜ್ಯಗಳಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕರ್ನಾಟಕದಲ್ಲಿ 3.1 ಕೋಟಿ ಜನರು ಸೇರಿದಂತೆ ಮಹಾರಾಷ್ಟ್ರದಲ್ಲಿ 3.69 ಕೋಟಿ, ಒಡಿಶಾದಲ್ಲಿ 1.67 ಕೋಟಿ, ಆಂದ್ರದಲ್ಲಿ 2.35 ಕೋಟಿ, ತೆಲಂಗಾಣದಲ್ಲಿ 1.78 ಕೋಟಿ ಮತ್ತು ಉತ್ತರ ಪ್ರದೇಶದಲ್ಲಿ 9.9 ಕೋಟಿ ಜನ ಬರಪೀಡಿತರಾಗಿದ್ದಾರೆ. ಅದೇ ವೇಳೆ ಗುಜರಾತ್, ಬಿಹಾರ್ ಮತ್ತು ಹರ್ಯಾಣ ಈ ಮೂರು ರಾಜ್ಯಗಳು ಬರಪೀಡಿತ ರಾಜ್ಯಗಳ ಪಟ್ಟಿಗೆ ಸೇರಲಿವೆ.
2,55,923 ಗ್ರಾಮಗಳು
2,55,923 ಗ್ರಾಮಗಳು ಬರಪೀಡಿತವಾಗಿವೆ. ಇದರಲ್ಲಿ 22,759 ಗ್ರಾಮಗಳು ಕರ್ನಾಟಕದ್ದಾಗಿದ್ದು, ಒಡಿಶಾದಲ್ಲಿ 29,077, ಆಂಧ್ರದಲ್ಲಿ 6,974, ತೆಲಂಗಾಣದಲ್ಲಿ 5,519 ಗ್ರಾಮಗಳು ಬರಪೀಡಿತವಾಗಿವೆ. ಆದಾಗ್ಯೂ, ಅತೀ ಹೆಚ್ಚು ಎಂದರೆ ಮಧ್ಯಪ್ರದೇಶದಲ್ಲಿ 42,829 ಗ್ರಾಮಗಳು ಬರಪೀಡಿತವಾಗಿವೆ.
368 ಸಾವು
ಸೂರ್ಯರಶ್ಮಿ ಆಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 368. ಸೂರ್ಯತಾಪಕ್ಕೆ ತೆಲಂಗಾಣದಲ್ಲಿ 122 (ಶನಿವಾರ 14 ಸಾವು ಮ್ತತು ಭಾನುವಾರ 13 ಸಾವು ಸೇರಿ), ಆಂಧ್ರದಲ್ಲಿ ಭಾನುವಾರ 32 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 169 ಎಂದು ಹೇಳಲಾಗುತ್ತಿದೆ. ಅದೇ ವೇಳೆ ಒಡಿಶಾದಲ್ಲಿ 73 ಮಂದಿ ಸೂರ್ಯತಾಪಕ್ಕೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸರ್ಕಾರ ಎರಡು ಜನ ಅಷ್ಟೇ ಸಾವನ್ನಪ್ಪಿದ್ದಾರೆ ಎನ್ನುತ್ತಿದೆ.
3 ರಿಂದ 4 ಲಕ್ಷ ಮಂದಿ ಗುಳೆ
ಹೈದ್ರಾಬಾದ್ -ಕರ್ನಾಟಕದ ಬರಪೀಡಿತ ಪ್ರದೇಶಗಳಿಂದ ಸರಿ ಸುಮಾರು 3ರಿಂದ 4 ಲಕ್ಷ ಮಂದಿ ಗೋವಾ, ಪುಣೆ, ಮುಂಬೈ, ಬೆಂಗಳೂರು ಮತ್ತು ಇನ್ನಿತರ ನಗರಗಳಿಗೆ ಗುಳೆ ಹೋಗಿದ್ದಾರೆ.
1,200 ಅಡಿ ಕುಸಿದ ಅಂರ್ಜಲದ ಮಟ್ಟ
ಬೆಂಗಳೂರಿನಲ್ಲಿ 1,200 ಅಡಿಯಷ್ಟು ಆಳಕ್ಕೆ ಅಂತರ್ಜಲದ ಮಟ್ಟ ಕುಸಿದಿದೆ. ಬೆಂಗಳೂರು ನಗರದಲ್ಲಿ ನೀರಿನ ಮಟ್ಟ 6 ಪಟ್ಟು ಆಳಕ್ಕೆ ಹೋಗಿದ್ದರೆ, ಕರ್ನಾಟಕದ ಗ್ರಾಮ ಪ್ರದೇಶಗಲ್ಲಿ ನೀರಿನ ಮಟ್ಟ 2005ರಿಂದ ಮೂರು ಪಟ್ಟಿನಷ್ಟು ಆಳಕ್ಕೆ ಹೋಗಿದೆ. ಕಳೆದ ಒಂದು ವರ್ಷದಿಂದ ತೆಲಂಗಾಣದಲ್ಲಿ ಅಂತರ್ಜಲದ ಮಟ್ಟ 2.61 ಮೀಟರ್ನಷ್ಟು ಆಳಕ್ಕೆ ಹೋಗಿದೆ.