ವಾಷಿಂಗ್ಟನ್: ಅಮೆರಿಕ ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ಮಾರಿದರೆ, ಪಾಕಿಸ್ತಾನ ಅದನ್ನು ಭಾರತದ ವಿರುದ್ಧ ಪ್ರಯೋಗಿಸುವ ಸಾಧ್ಯತೆಯಿದೆ ಎಂದು ಯುಎಸ್ ಕಾಂಗ್ರೆಸ್‌ನ ಉನ್ನತ ಮಟ್ಟದಲ್ಲಿರುವ ಸದಸ್ಯರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಹೇಳಿದ್ದಾರೆ.
ಭಯೋತ್ಪಾದಕರ ವಿರುದ್ಧ ಹೋರಾಟಕ್ಕಾಗಿ ಈ ಯುದ್ಧ ವಿಮಾನಗಳನ್ನು ಬಳಸುವ ಬದಲು ಪಾಕಿಸ್ತಾನ ಅದನ್ನು ಭಾರತದ ವಿರುದ್ಥ ಬಳಸಲಿದೆ. ಆದ್ದರಿಂದ ಅಮೆರಿಕ ತಮ್ಮ ತೀರ್ಮಾನವನ್ನು ಪುನರ್‌ಪರಿಶೀಲಿಸಿಕೊಳ್ಳಬೇಕಾಗಿದೆ ಎಂದು ಯುಎಸ್ ಕಾಂಗ್ರೆಸ್‌ನ ಸದಸ್ಯರು ಒಬಾಮ ಅವರಿಗೆ ಸೂಚಿಸಿದ್ದಾರೆ.
ಈ ವಿಷಯದ ಬಗ್ಗೆ ಅಮೆರಿಕ ಕಾಂಗ್ರೆಸ್‌ನ ಸದಸ್ಯರಿಗೆ ಆತಂಕವಿದೆ. ಆದ್ದರಿಂದ ಈ ತೀರ್ಮಾನದ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕೆಂದು ನಾವು ಹೇಳಿರುವುದಾಗಿ ಮ್ಯಾಟ್ ಸಲ್ಮಾನ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳು ಉಲ್ಬಣವಾಗುತ್ತಾ ಬರುತ್ತಿವೆ. ಪಾಕಿಸ್ತಾನ ಎಫ್ 16 ಭಾರತದ ವಿರುದ್ಧವೋ ಅಥವಾ ಇನ್ನಿತರ ಪ್ರಾದೇಶಿಕ ಶಕ್ತಿಗಳ ವಿರುದ್ಧ ಪ್ರಯೋಗಿಸುವ ಸಾಧ್ಯತೆಯಿದೆ.
ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಾಕಿಸ್ತಾನ ಸೈನ್ಯವನ್ನು ಸಜ್ಜಾಗಿರಿಸಬೇಕಾಗಿದೆ. ಇದು ಬಿಟ್ಟು ಭಾರತದ ವಿರುದ್ಧ ಯುದ್ಧ ಮಾಡಲು ತಂತ್ರ ರೂಪಿಸಬಾರದು. ಎಫ್ 16ನ್ನು ಖರೀದಿಸುವ ಮೂಲಕ ಸೈನ್ಯವನ್ನು ಬಲಗೊಳಿಸಲು ಮತ್ತು ಭಾರತದಷ್ಟೇ ಶಕ್ತಿಯುತವಾಗಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್‌ನ ಇನ್ನೊಬ್ಬ ಸದಸ್ಯ ಬ್ರಾಡ್ ಶೆರ್ಮಾನ್ ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ಮಾರುವ ಅಮೆರಿಕದ ತೀರ್ಮಾನವನ್ನು ಯುಎಸ್ ಕಾಂಗ್ರೆಸ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.