
ಬೆಂಗಳೂರು: ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್ ನ ಮೊದಲ ಸುರಂಗ ಮಾರ್ಗ ಶುಕ್ರವಾರ ಲೋಕಾರ್ಪಣೆಯಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಮೊದಲನೆ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಟ್ಟು 18.1 ಕಿ.ಮೀ. ಮಾರ್ಗ ಲೋಕಾರ್ಪಣೆ ಬಳಿಕ ಶನಿವಾರದಿಂದ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದೆ. ಮೂರನೇ ಹಳಿ ಮೂಲಕ ರೈಲಿಗೆ ವಿದ್ಯುತ್ ಸರಬರಾಜು ಮಾಡಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ‘ಥರ್ಡ್ ರೈಲ್’ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಸುರಂಗ ಮಾರ್ಗ ಇದಾಗಿದ್ದು, ಕೇಂದ್ರ ಸಚಿವ ವೆಂಕಯ್ಯನಾಯ್ಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಗಣ್ಯರು ಸುರಂಗ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಈ ಮೂಲಕ ಮೊದಲ ಹಂತದ ಒಟ್ಟಾರೆ 42.30 ಕಿ.ಮೀ. ಮಾರ್ಗದ ಪೈಕಿ 32.49 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದಂತಾಗಲಿದೆ. ಇನ್ನುಳಿದ 9.81 ಕಿ.ಮೀ. ಮಾರ್ಗ ಈ ವರ್ಷಾಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಎಂದು ಹೇಳಲಾಗುತ್ತಿದೆ.
33 ನಿಮಿಷಗಳಲ್ಲಿ 18.1 ಕಿ.ಮೀ. ಪ್ರಯಾಣ
ನಾಯಂಡಹಳ್ಳಿಯಿಂದ ವಿಧಾನಸೌಧಕ್ಕೆ ಪ್ರಯಾಣಿಸುವ ಪ್ರಯಾಣಿಕರ ಏಕೈಕ ದೂರು ಟ್ರಾಫಿಕ್ ಜಾಮ್. ಆದರೆ ಇದೀಗ ದಶಕಗಳ ಈ ಸಮಸ್ಯೆಗೆ ಮೆಟ್ರೋ ಒಂದು ರೀತಿಯ ಪರಿಹಾರವಾಗಿದ್ದು, ಟ್ರಾಫಿಕ್ ರಹಿತವಾಗಿ ಅದೂ ಕೂಡ ಕೇವಲ 33 ನಿಮಿಷದಲ್ಲಿ ನಾಯಂಡಹಳ್ಳಿಯಿಂದ ವಿಧಾನಸೌಧಕ್ಕೆ, ವಿಧಾನಸೌಧದಿಂದ ನಾಯಂಡಹಳ್ಳಿ ಯಾವುದೇ ಶ್ರಮವಿಲ್ಲದೆ ಪ್ರಯಾಣಿಸಬಹುದಾಗಿದೆ. ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಈಗಾಗಲೇ ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ, ನಾಯಂಡಹಳ್ಳಿಯಿಂದ ಮಾಗಡಿ ರಸ್ತೆವರೆಗಿನ 13.28 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚರಿಸುತ್ತಿದೆ. ಇದೀಗ 4.82 ಕಿ.ಮೀ. ಸುರಂಗ ಮಾರ್ಗದಲ್ಲೂ ರೈಲು ಸಂಚಾರ ಆರಂಭವಾಗುತ್ತಿದ್ದು, ಈ ಮೂಲಕ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಟ್ಟಾರೆ 18.10 ಕಿ.ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಈ ಅಂತರದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ನಿಗಮ (ಬಿಎಂಆರ್‌ಸಿಎಲ್) 40 ರು. ದರ ನಿಗದಿ ಮಾಡಿದೆ.
ವಿಧಾನಸೌಧ ಮುಂಭಾಗ ಸಮಾರಂಭ
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಗಣ್ಯರು ಮಿನ್ಕ್ಸ್ ಸ್ಕ್ವೇರ್ ನಿಲ್ದಾಣದಿಂದ ಮಾಗಡಿ ರಸ್ತೆವರೆಗಿನ ಸುರಂಗ ಮಾರ್ಗದಲ್ಲಿ ಸಂಚರಿಸಲಿದ್ದು, ಆ ಬಳಿಕ ವಿಧಾನಸೌಧ ಮುಂಭಾಗದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಂಡು, ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಸುರಂಗ ಮಾರ್ಗದಲ್ಲಿ ಬರುವ 5 ನಿಲ್ದಾಣಗಳಲ್ಲಿ ಬಹುತೇಕ ಎಲ್ಲ ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಂಡಿದೆಯಾದರೂ ಆದರೂ, ಚಿಕ್ಕಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇನ್ನು ನಿಲ್ದಾಣದ 2 ಪ್ರವೇಶ ದ್ವಾರಗಳಲ್ಲಿ ಒಂದೊಂದು ಕಡೆ ಎಸ್ಕಲೇಟರ್ ಅಳವಡಿಕೆ ಕಾರ್ಯ ಇನ್ನೂ ಮುಗಿದಿಲ್ಲ.
ಅದರಲ್ಲೂ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ 10 ಎಸ್ಕಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇವುಗಳ ಪೈಕಿ ಬಹುತೇಕ ಎಸ್ಕಲೇಟರ್‌ಗಳ ಅಳವಡಿಕೆ ಕಾರ್ಯ ಪೂರ್ಣವಾಗಿಲ್ಲ. ಹಾಗೆಯೇ ಉತ್ತರ-ದಕ್ಷಿಣ ಕಾರಿಡಾರ್‌ನ ನಿಲ್ದಾಣದ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ, ಅಲ್ಲಿಗೆ ಪ್ರವೇಶ ಒದಗಿಸುವ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ಕುತೂಹಲದಿಂದ ಪ್ರಯಾಣಿಕರು ಅತ್ತ ಕಡೆ ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
Advertisement