
ವಾಷಿಂಗ್ಟನ್: ಭಾರತ ಸಂಸತ್ತು ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಅಮೆರಿಕ ಮತ್ತು ಭಾರತ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಹೊಸ ಉತ್ತೇಜನ ದೊರೆಯಲಿದೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಹೇಳಿದ್ದಾರೆ.
ನಾಳೆಯಿಂದ 3 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಪೆನ್ನಿ ಪ್ರಿಟ್ಜ್ಕರ್ ಅವರು ಭಾರತದತ್ತ ಪ್ರಯಾಣ ಆರಂಭಿಸಿದ್ದು, ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಮಾತನಾಡಿದ ಅವರು, ಜಿಎಸ್ ಟಿ ಮಸೂದೆಗೆ ಭಾರತ ಅನುಮೋದನೆ ನೀಡಿರುವುದರಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಉತ್ತೇಜನ ದೊರೆಯಲಿದ್ದು, ವಾಣಿಜ್ಯ ವ್ಯವಹಾರ 109 ಬಿಲಿಯನ್ ಡಾಲರ್ ಗೇರಲಿದೆ ಎಂದು ಹೇಳಿದ್ದಾರೆ.
ಅಂತೆಯೇ ಉಭಯ ದೇಶಗಳ ನಡುವಿನ ವಾಣಿಜ್ಯಾಭಿವೃದ್ಧಿಗೆ ಇರುವ ತೊಡಕುಗಳು ಕೂಡ ಈ ಮೂಲಕ ನಿವಾರಣೆಯಾಗುವ ಆಶಾಭಾವವಿದ್ದು, ಭವಿಷ್ಯದಲ್ಲಿ ವೇಗದ ವಾಣಿಜ್ಯಾಭಿವೃದ್ಧಿ ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಭಾರತ ದೇಶದೊಂದಿಗಿನ ಸಂಬಂಧ ಅತ್ಯುತ್ತಮವಾಗಿತ್ತು ಎಂದು ಹೇಳಿರುವ ಪೆನ್ನಿ ಪ್ರಿಟ್ಜ್ಕರ್ ಅವರು, "ಕಳೆದ ಏಳೂವರೆ ವರ್ಷಗಳ ಅವಧಿಯಲ್ಲಿ ಉಭಯ ದೇಶಗಳ ವಾಣಿಜ್ಯ ಸಂಬಂಧ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.
"2005ರಲ್ಲಿನ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟನ್ನು ಗಮನಿಸಿದರೆ, 2015ರ ವೇಳೆಗಿನ ವಾಣಿಜ್ಯಾತ್ಮಕ ಸಂಬಂಧ ಸಾಕಷ್ಟು ಪ್ರಗತಿ ಸಾಧಿಸಿದ್ದು, ಅತ್ಯುತ್ತಮ ಪ್ರಗತಿ ಸಾಧಿಸಿದೆ. 2005ರಲ್ಲಿ ಉಭಯ ದೇಶಗಳ ವಾಣಿಜ್ಯ ವ್ಯವಾಹರ 72 ಬಿಲಿಯನ್ ಡಾಲರ್ ಗಳಷ್ಟಿತ್ತು. ಆದರೆ 2015ರ ವೇಳೆಗೆ ಇದು 37 ಬಿಲಿಯನ್ ಡಾಲರ್ ಗಳಷ್ಟು ಏರಿಕೆಯಾಗಿ 109 ಬಿಲಿಯನ್ ಡಾಲರ್ ಗೇರಿದೆ. ಅಂತೆಯೇ ಅಮೆರಿಕ ಹಾಗೂ ಭಾರತೀಯ ಕಂಪನಿಗಳ ಉಭಯ ದೇಶಗಳಲ್ಲಿನ ಬಂಡವಾಳ ಪ್ರಮಾಣ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಮೆರಿಕ ಭಾರತದಲ್ಲಿ 28 ಬಿಲಿಯನ್ ಡಾಲರ್ ಗೂ ಅಧಿಕ ಪ್ರಮಾಣದ ಹಣ ಹೂಡಿದ್ದರೆ, ಭಾರತೀಯ ಸಂಸ್ಥೆಗಳು ಅಮೆರಿಕದಲ್ಲಿ 11 ಬಿಲಿಯನ್ ಡಾಲರ್ ಗೂ ಅಧಿಕ ಬಂಡವಾಳ ಹೂಡಿವೆ.
ಅಮೆರಿಕದಲ್ಲಿರುವ ಭಾರತೀಯ ಸಂಸ್ಥೆಗಳಲ್ಲಿನ ನೌಕರರ ಸಂಖ್ಯೆ ಕೂಡ ಇದೀಗ 52 ಸಾವಿರಕ್ಕೆ ಏರಿಕೆಯಾಗಿದೆ ಎಂದು ಪೆನ್ನಿ ಪ್ರಿಟ್ಜ್ಕರ್ ಹೇಳಿದರು.
ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಅವರ ಪ್ರವಾಸ ನಾಳೆಯಿಂದ ಆರಂಭವಾಗಲಿದ್ದು, ಈ ಪ್ರವಾಸದಲ್ಲಿ ಪೆನ್ನಿ ಪ್ರಿಟ್ಜ್ಕರ್ ಭಾರತದ ಖ್ಯಾತ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಅಂತೆಯೇ ಅಮೆರಿಕದಲ್ಲಿ ಪ್ರವಾಸೋಧ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲೂ ಕೂಡ ಭಾರತೀಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
Advertisement