ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದದಿಂದ ಭಾರತಕ್ಕೇನು ಅನುಕೂಲ?

ಬಹು ಉದ್ದೇಶಿತ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಸಹಿ ಹಾಕಿದ್ದು, ಈ ಮಹತ್ವದ ಒಪ್ಪಂದದಿಂದ ಭಾರತಕ್ಕಾಗುವ ಅನುಕೂಲಗಳು ಮತ್ತು ಅನಾನುಕೂಲಗಳ ಸಣ್ಣ ವಿಶ್ಲೇಷಣೆ ಇಲ್ಲಿದೆ.

ವಾಷಿಂಗ್ಟನ್: ಬಹು ಉದ್ದೇಶಿತ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಸಹಿ ಹಾಕಿದ್ದು, ಈ ಮಹತ್ವದ ಒಪ್ಪಂದದಿಂದ ಭಾರತಕ್ಕಾಗುವ  ಅನುಕೂಲಗಳು ಮತ್ತು ಅನಾನುಕೂಲಗಳ ಸಣ್ಣ ವಿಶ್ಲೇಷಣೆ ಇಲ್ಲಿದೆ.

ಅಮೆರಿಕದ ಸಾಂಪ್ರದಾಯಿಕ ಎದುರಾಳಿ ರಷ್ಯಾ ಹಾಗೂ ಭಾರತದ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳ ತಂಟೆಯನ್ನು ಎದುರಿಸುವ ನಿಟ್ಟಿನಲ್ಲಿ ಉಭಯ  ದೇಶಗಳ ಪಾಲಿಗೆ ಈ ಒಪ್ಪಂದ ಅತ್ಯಂತ ಮಹತ್ವದ್ದು ಎಂದು ಹೇಳಲಾಗುತ್ತಿದೆ. ರಕ್ಷಣಾ ತಜ್ಞರ ಪ್ರಕಾರ ಈ ಒಪ್ಪಂದದಿಂದ ಭಾರತಕ್ಕೆ ಹಲವು ಲಾಭಗಳಿದ್ದು, ಭಾರತಕ್ಕೆ ಮಗ್ಗುಲ ಮುಳ್ಳಾಗಿ  ಪರಿಣಮಿಸಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳ ಬೆದರಿಕೆಯನ್ನು ಹಿಮ್ಮೆಟಿಸಲು ಸಹಕಾರಿಯಾಗುತ್ತದೆ.

ತಂತ್ರಜ್ಞಾನ
ಪ್ರಮುಖವಾಗಿ ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಉಭಯ ದೇಶಗಳು ತಮ್ಮ ತಮ್ಮ ಸೇನಾ ನೆಲೆಗಳನ್ನು ಪರಸ್ಪರ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಅಮೆರಿಕದ ಅತ್ಯಾಧುನಿಕ  ಯುದ್ಧ ವಿಮಾನಗಳು ಇಂಧನಕ್ಕಾಗಿ ಅಥವಾ ದುರಸ್ತಿಗಾಗಿ ಭಾರತೀಯ ಸೇನಾ ನೆಲೆಗಳಲ್ಲಿ ಇಳಿಯಬಹುದಾಗಿದೆ. ಯುದ್ಧ ವಿಮಾನ, ಹಡಗುಗಳಿಗೆ ಇಂಧನ ಭರ್ತಿ, ದುರಸ್ತಿ, ನಿರ್ವಹಣೆ ಇನ್ನು  ಸುಲಭವಾಗಲಿದೆ. ಅಲ್ಲದೆ ಭಾರತೀಯ ಸೈನಿಕರು ಅಮೆರಿಕದ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅವಕಾಶವಿರುವುದರಿಂದ ಅಲ್ಲಿನ ಅತ್ಯಾಧುನಿಕ ಯುದ್ಧೋಪಕರಣಗಳ ಕುರಿತು ಅರಿಯಲು  ನಮ್ಮ ಸೈನಿಕರಿಗೆ ನೆರವಾಗುತ್ತದೆ.

ಮೇಕ್ ಇನ್ ಇಂಡಿಯಾಗೆ ಬಲ
ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೆ ಬಲ ಬರಲಿದ್ದು, ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ತಯಾರಿಸುವ  ಇಂಗಿತವನ್ನು ಪೆಂಟಗನ್ ವ್ಯಕ್ತಪಡಿಸಿದೆ. ಆ ಮೂಲಕ ಹೊಸ ತಲೆಮಾರಿನ ಯುದ್ಧೋಪಕರಣಗಳ ತಂತ್ರಜ್ಞಾನ ಹಸ್ತಾಂತರ ಪ್ರಕ್ರಿಯೆ ಈ ಒಪ್ಪಂದದಿಂದ ಸುಲಭವಾಗಲಿದೆ.

ಒಪ್ಪಂದದ ಇತಿ-ಮಿತಿಗಳೇನು?

ಇನ್ನು ನೂತನ ಒಪ್ಪಂದದ ಅನ್ವಯ ಭಾರತದಲ್ಲಿ ಅಮೆರಿಕವಾಗಲಿ, ಅಮೆರಿಕದಲ್ಲಿ ಭಾರತವಾಗಲಿ ಯಾವುದೇ ಕಾರಣಕ್ಕೂ ಸೇನೆ ನಿಯೋಜಿಸುವಂತಿಲ್ಲ. ಹಾಗೆಯೇ ಭಾರತದ ಮಿತ್ರ  ರಾಷ್ಟ್ರದೊಂದಿಗೆ ಅಮೆರಿಕ ಯುದ್ಧ ಸಾರಿದರೂ ಈ ಒಪ್ಪಂದ ತಾತ್ಕಾಲಿಕವಾಗಿ ರದ್ದಾಗಲಿದೆ. ಯುದ್ಧ, ಮತ್ತಿತರ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಈ ಒಪ್ಪಂದ ವ್ಯಾಪ್ತಿಗೆ ಬರುವುದಿಲ್ಲ.

ಯಾವುದಕ್ಕೆ ಸಹಕಾರ?

ಸೈನಿಕರಿಗೆ ಆಹಾರ, ನೀರು, ವಸತಿ, ಸಾಗಾಣಿಕೆ, ಇಂಧನ, ಪೆಟ್ರೋಲಿಯಂ ಉತ್ಪನ್ನ, ವೈದ್ಯಕೀಯ ಸೇವೆ, ತರಬೇತಿ, ಯುದ್ಧೋಪಕರಣಗಳ ಬಿಡಿಭಾಗ ಪೂರೈಕೆ, ನಿರ್ವಹಣೆ ಮತ್ತಿತರ  ಸೇವೆಗಳನ್ನು ಈ ಒಪ್ಪಂದ ಒಳಗೊಂಡಿದೆ.

ಭಾರತಕ್ಕಿರುವ ಆತಂಕಗಳೇನು?

ಅಮೆರಿಕ ಜತೆಗಿನ ಒಪ್ಪಂದದಿಂದ ಭಾರತ ತನ್ನ ಕಾರ್ಯತಂತ್ರದ ಸ್ವಾತಂತ್ರ್ಯ ಕಳೆದುಕೊಳ್ಳಬಹುದು. ಅಂತೆಯೇ ಅಮೆರಿಕ ಭಾರತದ ನಿರ್ಧಾರಗಳಲ್ಲಿ ಮೂಗು ತೂರಿಸಿ, ಸವಾರಿ ಮಾಡಲು  ಯತ್ನಿಸಬಹುದು. ಹೊಸ ಹೊಸ ರಾಜತಾಂತ್ರಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗಬಹುದು.

ಪಾಕ್ ಚೀನಾಗೆ ಕಠಿಣ ಸಂದೇಶ

ಭಾರತ-ಅಮೆರಿಕ ನಡುವಿನ ಈ ಒಪ್ಪಂದದಿಂದಾಗಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕಿಂತ ಚೀನಾ ದೇಶಕ್ಕೆ ಹೆಚ್ಚು ಆಂತಕ ಎಂದು ಹೇಳಲಾಗುತ್ತಿದೆ. ಚೀನಾ ಕೇವಲ ಭಾರತ  ಮಾತ್ರವಲ್ಲದೇ ಅಮೆರಿಕಕ್ಕೂ ಕೂಡ ಪ್ರಮುಖ ಎದುರಾಳಿಯಾಗಿದ್ದು, ಚೀನಾವನ್ನು ಪ್ರತಿಬಂಧಿಸಲು ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಕೈಜೋಡಿಸಿರುವುದರಿಂದ ಚೀನಾಕ್ಕೆ ಈ ಒಪ್ಪಂದ  ದೊಡ್ಡ ತಲೆನೋವಾಗಿ ಪರಿಣಮಿಸಲಿದೆ ಎಂಬುದು ವಿಶ್ಲೇಷಕರ ವಾದ. ಉತ್ತರಾಖಂಡ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ನಡೆಸುವ ಅಕ್ರಮ ಪ್ರವೇಶ, ದಕ್ಷಿಣ ಚೀನಾ ಸಮುದ್ರದಲ್ಲಿ  ಅಧಿಪತ್ಯ ಸ್ಥಾಪಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಈ ಒಪ್ಪಂದ ಭಾರಿ ಹಿನ್ನಡೆ ಉಂಟು ಮಾಡಲಿದ್ದು, ಭಾರತೀಯ ನೆಲೆಗಳಲ್ಲಿ ಅಮೆರಿಕ ಸೇನೆ ನಿಯೋಜನೆಯಾಲಿದೆ. ಆ ಮೂಲಕ ಭಾರತದ  ಸೇನಾ ನೆಲೆಯನ್ನು ಬಳಸಿಕೊಂಡು ಅಮೆರಿಕ ಚೀನಾದ ಮೇಲೆ ನಿಗಾ ಇರಿಸಬಹುದಾಗಿದೆ. ಭಾರತ ಹಾಗೂ ಅಮೆರಿಕ ನೌಕಾಪಡೆಗಳ ನಡುವೆ ಸಹಕಾರ ಮತ್ತಷ್ಟು ಹೆಚ್ಚಲಿದ್ದು, ಜಂಟಿ  ಸಮರಾಭ್ಯಾಸವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಾಗಿದೆ. ಭದ್ರತೆ ಜತೆಗೆ ಮಾಹಿತಿಗಳನ್ನೂ ವಿನಿಮಯ ಮಾಡಿಕೊಳ್ಳುವ ಈ ಒಪ್ಪಂದ ಭಾರತಕ್ಕೆ ಮಹತ್ವದ್ದಾಗಿದೆ ಎಂಬುದು ಸಚಿವ  ಮನೋಹರ ಪರಿಕ್ಕರ್ ವಿಶ್ವಾಸ.

Related Stories

No stories found.

Advertisement

X
Kannada Prabha
www.kannadaprabha.com