
ಚೆನ್ನೈ: ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಚೆನ್ನೈ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಸಾವಿರಾರು ಮರಗಳು ಧರೆಗುರುಳಿದೆ ಎಂದು ತಿಳಿದುಬಂದಿದೆ.
ಚೆನ್ನೈನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಕರಾವಳಿ ತೀರದಲ್ಲಿರುವ ಮನೆಗಳ ಮೇಲ್ಚಾವಣಿ ಕಿತ್ತು ಬರುವಷ್ಟರ ಮಟ್ಟಿಗೆ ಚಂಡಮಾರುತ ಬೀಸುತ್ತಿದೆ. ಮುಂದಿನ ಮೂರು ಗಂಟೆಗಳ ಕಾಲ ಚೆನ್ನೈನಲ್ಲಿ ಚಂಡಮಾರುತ ಅಬ್ಬರಿಸಲಿದ್ದು, ಬಳಿಕ ಚಂಡಮಾರುತ ದಕ್ಷಿಣ ಆಂಧ್ರ ಪ್ರವೇಶಿಸಲಿದೆ. ಇಲ್ಲಿನ ನೆಲ್ಲೂರು, ಪ್ರಕಾಶಂ, ಕೃಷ್ಣಾ, ಮಚಲೀಪಟ್ಟಣದಲ್ಲಿ ಚಂಡಮಾರುತ ತನ್ನ ಪರಿಣಾಮ ಬೀರಿ ಬಳಿಕ ಗೋವಾದತ್ತ ಪ್ರಯಾಣ ಬೆಳೆಸಲಿದೆ. ಪ್ರಸ್ತುತ ಚಂಡಮಾರುತ ಪ್ರತೀ ಗಂಟೆಗೆ 110ರಿಂದ 150 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧರೆಗುರುಳಿದ ಸಾವಿರಾರು ಮರಗಳು
ಇನ್ನು ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ನಗರಾದಾದ್ಯಂತ ಸಾವಿರಾರು ಮರಗಳು ಧರೆಗುರುಳಿದ್ದು, ಮಾಜಿ ಸಿಎಂ ಜಯಲಲಿತಾ ಅವರ ನಿವಾಸ ಪೋಯಸ್ ಗಾರ್ಡನ್ ನಲ್ಲಿ 7 ಮರಗಳು ಧರೆಗುರುಳಿದ್ದು, ಉಳಿದಂತೆ ಮಂಡವೇಲಿಯಲ್ಲಿ 23, ಗೋಪಾಲಪುರಂನಲ್ಲಿ 16, ರಾಯಪೇಟೆಯಲ್ಲಿ 59, ನುಂಗಬಾಕ್ಕಂನಲ್ಲಿ 20 ಮರಗಳು ಸೇರಿದಂತೆ ಚೆನ್ನೈನಾದ್ಯಂತ ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಇನ್ನ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈನಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಚೆನ್ನೈನ ಎಲ್ಲ ಖಾಸಗಿ ಕಂಪನಿಗಳು ಕೂಡ ರಜೆಘೋಷಣೆ ಮಾಡಿವೆ.
ನೇಪಿಯರ್ ಸೇತುವೆ ಮೇಲೆ ಸಂಚಾರ ಸ್ಥಗಿತ
ಚಂಡಮಾರುತ ಪರಿಣಾಮ ಚೆನ್ನೈನ ಪ್ರಮುಖ ನೇಪಿಯರ್ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಚೆನ್ನೈನ ಶಾಸ್ತ್ರಿ ನಗರದಲ್ಲಿ 4 ಬಸ್ ಗಳು ಸೇರಿದಂತೆ ಒಟ್ಟು 7 ವಾಹನಗಳು ಜಲಾವೃತ್ತವಾಗಿದ್ದು, ಒಟ್ಟು 45ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿಗ್ರಹ ದಳ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ.
Advertisement