
ಬಾಲಸೋರ್: ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಸತತ 2 ವರ್ಷಗಳ ಬಳಿಕ ಮತ್ತೆ ಆಗಸದಲ್ಲಿ ಘರ್ಜಿಸಲು ಸಿದ್ಧವಾಗಿದ್ದು, ಸುಮಾರು 5 ಸಾವಿರ ದೂರ ಕ್ರಮಿಸಬಲ್ಲ ಈ ದೂರಗಾಮಿ ಕ್ಷಿಪಣಿ ಇದೀಗ ಉಡಾವಣೆಗೆ ಸಿದ್ಧವಾಗಿದೆ.
ಒಡಿಶಾದ ಬಾಲಾಸೋರ್ ನಲ್ಲಿ ಈ ಪ್ರಬಲ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆಗೆ ಸಿದ್ಧಗೊಳಿಸಲಾಗಿದ್ದು, ಪರಮಾಣು ಶಕ್ತಿ ಖಾತೆಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆ ಬಳಿಕೆ ಈ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗುತ್ತದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್‌ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮರ್ಥ್ಯ ಹೊಂದಿದೆ.
ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 1.5 ಟನ್ ಭಾರ ಹೊಂದಿದೆ. ಮೊದಲನೇ ಸ್ತರದ ರಾಕೆಟ್ ಎಂಜಿನ್, ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಪ್ರಬಲ ಕ್ಷಿಪಣಿಗಿದ್ದು, ಸಂಚಾರಿ ಸಾಮರ್ಥ್ಯ ಇರುವ ಡಬ್ಬಿಯಾಕಾರದ ಕ್ಯಾನಿಸ್ಟರ್‌ನಲ್ಲಿಟ್ಟು ಉಡಾಯಿಸುವಂಥ ಮಾದರಿಯ ಕ್ಷಿಪಣಿ ಇದು. ಉಡಾವಣೆಗೆ ಸ್ಥಿರ ವೇದಿಕೆಯೇ ಬೇಕೆಂದೇನೂ ಇಲ್ಲ. ಮೊಬೈಲ್ ಲಾಂಚರ್ ವಾಹನ ಬಳಕೆ ಮಾಡಿ ಈ ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಯಿಂದಾದರೂ ತ್ವರಿತವಾಗಿ ಉಡಾಯಿಸಬಹುದಾಗಿದೆ. ಇನ್ನು ಕ್ಷಿಪಣಿಯ ಕ್ಯಾನಿಸ್ಟರ್ ವ್ಯವಸ್ಥೆ ವೈರಿಗಳ ಕಣ್ತಪ್ಪಿಸಲು ಸಹಕಾರಿಯಾಗುತ್ತದೆ. ಇದೇ ಕಾರಣಕ್ಕೆ ಭಾರತದ ಈ ಪ್ರಬಲ ಕ್ಷಿಪಣಿ ಇದೀಗ ಚೀನಾ ಮತ್ತು ಪಾಕಿಸ್ತಾನ ದೇಶಗಳ ತಲೆನೋವಿಗೆ ಕಾರಣವಾಗಿದೆ.
ಈ ಹಿಂದೆ 2012 ಮತ್ತು 2013 ಮತ್ತು 2015ರಲ್ಲಿ ಒಟ್ಟು 3 ಬಾರಿ ಅಗ್ನಿ-5 ಕ್ಷಿಪಣಿಯ ಮೂಲ ಆವೃತ್ತಿಯ ಪರೀಕ್ಷಾರ್ಥ ಉಡಾವಣೆನ ಮಾಡಲಾಗಿತ್ತು. ಈ ಮೂರೂ ಪರೀಕ್ಷೆಯೂ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಇದೀಗ ತನ್ನ ಅಂತಿಮ ಪರೀಕ್ಷೆ ಅಗ್ನಿ-5 ಕ್ಷಿಪಣಿ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಇದನ್ನು ಪರೀಕ್ಷೆ ನಡೆಸಲು ಡಿಆರ್ ಡಿಒ ಸಿದ್ಧತೆ ಮಾಡಿಕೊಂಡಿದೆ.
ಮುಂದಿನ ವರ್ಷ ಸೇನೆಗೆ ಸೇರ್ಪಡೆಯಾಗಲಿದೆ ಈ ಪ್ರಬಲ ಮತ್ತು ವಿಧ್ವಂಸಕ ಕ್ಷಿಪಣಿ
ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸ್ತುತ ನಡೆಯುವ ಪರೀಕ್ಷೆಯೇ ಅಂತಿಮವಾಗಲಿದ್ದು, ಈ ಪರೀಕ್ಷೆ ಬಳಿಕ ಭಾರತದ ಈ ಪ್ರಬಲ ವಿಧ್ವಂಸಕ ಕ್ಷಿಪಣಿ ಭಾರತೀಯ ಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವಂತೆ ಮುಂದಿನ ವರ್ಷದೊಳಗಾಗಿ ಈ ಅಗ್ನಿ-5 ಕ್ಷಿಪಣಿಯನ್ನು ಭಾರತೀಯ ಸೇನೆಯ ಕಾರ್ಯಾಚರಣೆಗೆ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಗ್ನಿ-5 ಕ್ಷಿಪಣಿಯನ್ನು ಉಡಾವಣೆ ಮಾಡಲು ಅನುಮತಿ ನೀಡುವ ಅಧಿಕಾರ ಪರಮಾಣು ಇಂಧನ ಖಾತೆಯನ್ನು ಹೊಂದಿರುವ ಪ್ರಧಾನ ದೇಶದ ಮಂತ್ರಿಗೆ ಮಾತ್ರ ಇದ್ದು, ಅಗ್ನಿ-5 ಕ್ಷಿಪಣಿಯನ್ನು ಯುದ್ಧಕ್ಕಿಂತ ಶಾಂತಿ ಉದ್ದೇಶಕ್ಕೆ ಬಳಸುವ ಉದ್ದೇಶವನ್ನು ಭಾರತ ಹೊಂದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಅಗ್ನಿ 5 ಕ್ಷಿಪಣಿಯ ಕಾರ್ಯಾಚರಣೆಗೆ ಅನುಮತಿ ನೀಡಬೇಕು.
ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಪರೀಕ್ಷಾರ್ಥ ಉಡಾವಣೆ
ಇನ್ನು ಡಿಆರ್ ಡಿಒ ಮೂಲಗಳು ತಿಳಿಸಿರುವಂತೆ ಈ ಪ್ರಬಲ ಕ್ಷಿಪಣಿಯ ಅಂತಿಮ ಪರೀಕ್ಷಾರ್ಥ ಉಡಾವಣೆ ಇದೇ ಡಿಸೆಂಬರ್ ಅಂತ್ಯ ಅಂದರೆ ಡಿಸೆಂಬರ್ ಕೊನೇ ವಾರದಲ್ಲಿ ಅಥವಾ ಮುಂದಿನ ವರ್ಷಾರಂಭ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕ್ಷಿಪಣಿ ಉಡಾವಣೆ ಸಜ್ಜಾಗಿದೆಯಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಅನಿವಾರ್ಯ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಲಭ್ಯತಿ ದಿನಾಂಕ ಖಚಿತಪಡಿಸಿಕೊಂಡು ಉಡಾವಣೆ ದಿನಾಂಕ ಘೋಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
Advertisement