ಅಗ್ನಿ-5 ಕ್ಷಿಪಣಿ ಯಶಸ್ವೀ ಪರೀಕ್ಷೆ; ವಿಶ್ವಸಂಸ್ಥೆಗೆ ಚೀನಾ ದೂರು!
ಬೀಜಿಂಗ್: ಸಂಪೂರ್ಣ ಪಾಕಿಸ್ತಾನ ಮತ್ತು ಚೀನಾದ ಅರ್ಧ ಭೂಭಾಗದಲ್ಲಿನ ಯಾವುದೇ ಗುರಿಗಳನ್ನು ತಲುಪಬಲ್ಲ ಅಗ್ನಿ-5 ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಚೀನಾ ವಿಶ್ವಸಂಸ್ಥೆಯಲ್ಲಿ ತನ್ನ ಆತಂಕ ವ್ಯಕ್ತಪಡಿಸಿದೆ.
ಸೋಮವಾರ ಒಡಿಶಾದ ಬಾಲಸೋರ್ ನಲ್ಲಿ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪ್ರಯೋಗವಾದ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ಚೀನಾ ಪ್ರತಿನಿಧಿ ದೂರು ನೀಡಿದ್ದು, "ಭದ್ರತಾ ಮಂಡಳಿ ನಿರ್ಬಂಧ ಮತ್ತು ನಿಬಂಧನೆಯ ಸ್ಪಷ್ಟನೆ ನೀಡದೆ ಭಾರತ ಹೇಗೆ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮುಂದಿನ ವಿಶ್ವಸಂಸ್ಥೆಯ ಕಲಾಪದಲ್ಲೂ ಚೀನಾ ಈ ವಿಚಾರವನ್ನು ಪ್ರಸ್ತಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಅಗ್ನಿ- 5 ಕ್ಷಿಪಣಿ ಯಶಸ್ವಿ ಉಡಾವಣೆಯ ಬಳಿಕ ತೀವ್ರ ಆತಂಕಕ್ಕೀಡಾಗಿರುವ ಚೀನಾ ಈ ಸಂಬಂಧ ಭಾರತದ ನಿಲುವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲು ತೀರ್ಮಾನಿಸಿದೆ. ಪಾಕಿಸ್ತಾನ, ಚೀನಾ ಸೇರಿದಂತೆ ಏಷ್ಯಾ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವಿರುವ ಅಗ್ನಿ-5 ಕ್ಷಿಪಣಿ ಯಶಸ್ವಿ ಉಡಾವಣೆ ಚೀನಾ ಮತ್ತು ಪಾಕಿಸ್ತಾನ ದೇಶಗಳ ನಿದ್ದೆಗೆಡಿಸಿದ್ದು, ಒಂದೆಡೆ ಜಾಗತಿಕ ಮಟ್ಟದಲ್ಲಿ ಭಾರತದ ಶಸ್ತ್ರಾಸ್ತ್ರ ಪೈಪೋಟಿಯಿಂದ ತನ್ನ ಪ್ರಾಬಲ್ಯ ತಗ್ಗಬಹುದೆಂಬ ಆತಂಕ, ಮತ್ತೊಂದೆಡೆ ಭವಿಷ್ಯದಲ್ಲಿ ದೇಶದ ಭದ್ರತೆಗೆ ಮಾರಕವಾಗಬಲ್ಲದೆಂಬ ಭಯ ಚೀನಾವನ್ನು ಕಾಡುತ್ತಿದೆ. ಹೀಗಾಗಿಯೇ ರುವ ಚೀನಾ, ವಿಶ್ವಸಂಸ್ಥೆಯಲ್ಲಿ ಈ ವಿಚಾರವನ್ನು ಮಂಡಿಸಲು ನಿರ್ಧರಿಸಿದೆ.
ಇನ್ನು ಚೀನಾ ಪ್ರಶ್ನೆಗೆ ಭಾರತ ದಿಟ್ಟವಾಗಿ ಉತ್ತರಿಸಿದ್ದು, ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಅವರು, ಯಾವುದೇ ಒಂದು ರಾಷ್ಟ್ರವನ್ನು ಗುರಿಯಾಗಿಸಿಕೊಂಡು ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿಲ್ಲ. ವಿಶ್ವಸಮುದಾಯದ ಬದ್ಧತೆಯೊಂದಿಗೆ ಭಾರತ ಕಾರ್ಯ ನಿರ್ವಹಿಸುತ್ತಿದ್ದು, ಭಾರತದ ಎಲ್ಲ ಕಾರ್ಯತಂತ್ರಗಳು ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಹೊರತು ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಳ್ಳಲು ಅಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ