ಸಾವಿನಲ್ಲೂ ಸಾರ್ಥಕತೆ ಮೆರೆದ ಹರೀಶ್: ಕ್ಯಾಮೆರಾ ಮುಂದೆ ರಾಜಕೀಯ ಪಕ್ಷಗಳ ನೆರವು

ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಘಟನೆ ಇದೀಗ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಕಾರಣವಾಗಿದ್ದು, ಘಟನೆಯನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ...
ಸಾವಿನಲ್ಲೂ ಸಾರ್ಥಕತೆ ಮೆರೆದ ಹರೀಶ್: ಕ್ಯಾಮೆರಾ ಮುಂದೆ ರಾಜಕೀಯ ಪಕ್ಷಗಳ ನೆರವು
ಸಾವಿನಲ್ಲೂ ಸಾರ್ಥಕತೆ ಮೆರೆದ ಹರೀಶ್: ಕ್ಯಾಮೆರಾ ಮುಂದೆ ರಾಜಕೀಯ ಪಕ್ಷಗಳ ನೆರವು
ಬೆಂಗಳೂರು: ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಘಟನೆ ಇದೀಗ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಕಾರಣವಾಗಿದ್ದು, ಘಟನೆಯನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಡೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸಾವನ್ನಪ್ಪಿದ್ದ ಯುವಕ ಹರೀಶ್ ಕುಟುಂಬಕ್ಕೆ 5 ಲಕ್ಷ ಹಣವನ್ನು ನೀಡಿದ್ದರು ಮತ್ತು ಇದನ್ನು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಇದೀಗ ಇದೇ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕ್ಯಾಮೆರಾ ಮುಂದೆ ಮೃತನ ಕುಟುಂಬಕ್ಕೆ ಹಣ ನೀಡಿದ ಜಮೀರ್ ಅಹ್ಮದ್ ಅವರ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ರಾಜಕೀಯ ಗಣ್ಯರಿಗೆ ಪ್ರಚಾರ ಪಡೆದುಕೊಳ್ಳುವುದು ಬೇಕು. ಪ್ರಚಾರ ಪಡೆದುಕೊಳ್ಳುವುದು ಸರಿ. ಆದರೆ, ಇಂತಹ ಘಟನೆಗಳಲ್ಲಿಯೂ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ಸಲ್ಲದು. ಒಂದು ಜಮೀರ್ ಅವರು ಯಾರಿಗೂ ತಿಳಿಯದೆಯೇ ಮೃತ ಯುವಕನ ಕುಟುಂಬಕ್ಕೆ ನೀಡಿದ್ದರೆ, ಆ ವಿಷಯವನ್ನು ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದರೆ ಅದರ ಮೌಲ್ಯ ಬೇರೆಯೇ ಆಗಿರುತ್ತಿತ್ತು ಎಂದು ಹೇಳಿದ್ದಾರೆ. 
ಇನ್ನು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿರುವ ಶಾಸಕ ಜಮೀರ್ ಅಹ್ಮದ್ ಅವರು, "ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸಂಬಂಧ ಗುಬ್ಬಿಗೆ ಬಂದಿದ್ದೆ. ಆಗ ಘಟನೆ ಕುರಿತು ಮಾಹಿತಿ ತಿಳಿಯಿತು. ಹೀಗಾಗಿ ಮೃತನ ಕುಟುಂಬಸ್ಥರನ್ನು ಭೇಟಿ ಮಾಡಲು ಬಂದೆ ಅಷ್ಟೇ. ಜನರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಸಹಾಯ ಮಾಡಿರುವು ನನ್ನ ಆತ್ಮಹಕ್ಕೆ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.
ಡಾ.ತಿಮ್ಮಪ್ಪ ಅವರು ಮಾತನಾಡಿ, ಘಟನೆ ಸೂಕ್ಷ್ಮ ವಿಚಾರವಾಗಿದೆ. ಜಮೀರ್ ಅವರು ರಾಜಕಾರಣಿಯಾಗಿದ್ದು, ಪ್ರಚಾರಕ್ಕಾಗಿ ಅವರು ಮಾಡಿರುವುದು ಸರಿ. ಅವರು ಮೃತ ಕುಟುಂಬಕ್ಕೆ ನೀಡಿರುವ ಹಣ ಕೇವಲ ಪ್ರಚಾರ ದೃಷ್ಟಿಯಲ್ಲಿ ಮಾತ್ರವೇ ವಿನಃ ಮತ್ತಾವುದೇ ಕಾರಣಕ್ಕೂ ಅಲ್ಲ ಎಂದು ಹೇಳಿದ್ದಾರೆ. 
ಕೆಲವೊಮ್ಮೆ ನಮ್ಮ ಊಹೆಗೂ ಮೀರಿದ ಘಟನೆಗಳು ನಡೆದು ಹೋಗಿಬಿಡುತ್ತವೆ. ನೆಲಮಂಗಲದಲ್ಲೂ ಇಂತಹದ್ದೇ ಊಹೆಗೂ ಮೀರಿದ ಘಟನೆಯೊಂದು ಮಂಗಳವಾರ ಬೆಂಗಳೂರು-ತುಮಕೂರಿನ ಹೆದ್ದಾರಿಯಲ್ಲಿ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ತನ್ನ ಹುಟ್ಟೂರಿಗೆ ಹೋಗಿ ವಾಪಸ್ಸಾಗುತ್ತಿದ್ದ ಯುವಕನೋರ್ವನಿಗೆ ರಭಸದಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ರಸ್ತೆಯ ಮೇಲೆ ಬಿದ್ದ ಯುವಕನ ಹೊಟ್ಟೆಯ ಮೇಲೆ ಲಾರಿ ಹರಿದಿತ್ತು. ಅಪಘಾತದಲ್ಲಿ ದೇಹ ಎರಡು ಭಾಗವಾದರೂ ಯುವಕ ಮಾತ್ರ ತನ್ನ ದೇಹವನ್ನು ದಾನ ಮಾಡುವಂತೆ ದಾರಿಯಲ್ಲಿ ಹೋಗುತ್ತಿದ್ದವರಲ್ಲಿ ಮೊರೆಯಿಡುತ್ತಿದ್ದ. 
ವಿಪರ್ಯಾಸದ ಸಂಗತಿಯೆಂದರೆ ನಮ್ಮ ಜನ ರಸ್ತೆಯಲ್ಲಿ ಬಿದ್ದಿದ್ದ ಯುವಕ ಮೊರೆಯಿಡುತ್ತಿದ್ದರೂ ಆತನ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಅಪಘಾತವಾಗಿ ಅರ್ಧ ಗಂಟೆಯಾದರೂ ಆತನ ಮೊರೆಕೇಳಲು ಯಾರೊಬ್ಬರು ಬಂದಿರಲಿಲ್ಲ. ಮಾನವೀಯತೆ ಮರೆತು ಬಿಟ್ಟಿದ್ದರು. ಕೆಲವು ನಿಮಿಷಗಳಲ್ಲೇ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ. ಆದರೆ, ಕೊನೆಗೂ ಆತನ ಕೊನೆಯಂತೆಯೇ ಕಣ್ಣುಗಳನ್ನು ದಾನ ಮಾಡಲಾಗಿತ್ತು. 
ಈ ಘಟನೆ ನಡೆದ ಸಾಕಷ್ಟು ಜನರ ಮನ ಕಲಕುವಂತೆ ಮಾಡಿತ್ತು. ಹಲವು ಮಾಧ್ಯಮಗಳು ಕೂಡ ಅಪಘಾತದ ದೃಶ್ಯಗಳನ್ನು ತೋರಿಸಿ ದಿನವಿಡೀ ಸುದ್ದಿಗಳನ್ನು ಮಾಡಿತ್ತು. ಇದರಂತೆ ಘಟನೆ ನಡೆದ ಒಂದು ದಿನದ ಬಳಿಕ ಶಾಸಕ ಜಮೀರ್ ಅಹ್ಮದ್ ಅವರು ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ನೀಡಿದ್ದರು. ಮಾಧ್ಯಮಗಳೊಂದಿಗೆ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಆದರೆ, ಇದೇ ಸಹಾಯ ಇದೀಗ ಹಲವು ಟೀಕೆಗಳಿಗೆ ಕಾರಣವಾಗಿದೆ. 
ಯುವಕನೊಬ್ಬ ಸಾವಿನಂಚಿನಲ್ಲಿಯೂ ದೇಹದಾನ ಮಾಡುವಂತೆ ಮೊರೆಯಿಟ್ಟು ಕೊನೆಗೂ ಒಂದು ಜೀವಕ್ಕೆ ಬೆಳಕಾದ. ಆದರೆ, ಇಂದಿನ ನಮ್ಮ ರಾಜಕಾರಣಿಗಳು ಇಂತಹ ಹೃದಯವಿದ್ರಾವಕ ಘಟನೆಯಲ್ಲಿಯೂ ರಾಜಕೀಯ ಮಾಡಿ, ಪ್ರಚಾರಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com