ಹಿಂಬದಿ ಸವಾರರಿಗೂ ಇಂದಿನಿಂದ ಹೆಲ್ಮೆಟ್

ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಡ್ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಇಂದಿನಿಂದ ಜಾರಿಗೆ ಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಡ್ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಇಂದಿನಿಂದ ಜಾರಿಗೆ ಬಂದಿದೆ.

ದ್ವಿಚಕ್ರ ವಾಹನಗಳ ಸವಾರರ ಜತೆಗೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ತೆರಬೇಕಾಗುತ್ತದೆ. ಮೋಟಾರ್ ವಾಹನ ಕಾಯಿದೆ ಪ್ರಕಾರ ಹೆಲ್ಮೆಟ್ ರಹಿತ ಪ್ರಯಾಣ ಅಪರಾಧವಾಗಿದ್ದು, ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ. ಕೆಲವರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಇದೇ ಪ್ರಥಮ ಬಾರಿಗೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದೆ. ಆರಂಭದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ಅವರಿಗೆ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿ ನಿಯಮ ಕಡ್ಡಾಯದ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತದೆ.

ಸುಪ್ರೀಂಕೋರ್ಟ್ ನೇಮಕ ಮಾಡಿದ್ದ 21 ಸದಸ್ಯರ ರಸ್ತೆ ಸುರಕ್ಷತೆ ಸಮಿತಿ, ದೇಶಾದ್ಯಂತ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸು ಒಪ್ಪಿಕೊಂಡ ಸುಪ್ರೀಂಕೋರ್ಟ್, ದೇಶಾದ್ಯಂತ ಜಾರಿಗೊಳಿಸುವಂತೆ ಆದೇಶಿಸಿತ್ತು. ಹೀಗಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಈ ನಿಯಮವನ್ನು ಈಗಾಗಲೇ ಜಾರಿ ಮಾಡಿವೆ. ಆದರೆ ಕರ್ನಾಟಕ ಸರ್ಕಾರ ಇದನ್ನು ಜಾರಿ ಮಾಡಿಲಿಲ್ಲ.

ಒಂದು ವೇಳೆ ಈ ಆದೇಶವನ್ನು ಜಾರಿ ಮಾಡದೇ ಹೋದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಕಾರಣದಿಂದ ರಾಜ್ಯ ಸರ್ಕಾರ ಡಿಸೆಂಬರ್ 28 ರಂದೇ ಅಧಿಸೂಚನೆ ಹೊರಡಿಸಿತ್ತು. ಆ ದಿನದಿಂದ 15 ದಿನಗಳೊಳಗೆ ಆದೇಶ ಪಾಲಿಸಬೇಕೆಂಬ ಆದೇಶದಂತೆ ಮಂಗಳವಾರದಿಂದ ಪಾಲಿಸಬೇಕಾಗಿದೆ. ಈ ಕಾನೂನು ಜಾರಿಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಬಹುದು ಎಂಬ ಮುನ್ಸೂಚನೆ ಸರ್ಕಾರದ ಗಮನದಲ್ಲಿದ್ದರೂ ಸುಪ್ರೀಂ ಆದೇಶ ಪಾಲಿಸಬೇಕಾದ್ದರಿಂದ ಇಕ್ಕಟ್ಟಿಗೆ ಸಿಲುಕಿದೆ.

ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದಾಗ ಅವರ ಶಿರಕ್ಕೆ ತಕ್ಕಂತಹ ಹೆಲ್ಮೆಟ್ ಬಳಸಬೇಕಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್‍ಗಳ ಕೊರತೆ ಇರುವುದರಿಂದ ಪೊಲೀಸರು ಇನ್ನಷ್ಟು ಸಮಯವಾಕಾಶ ನೀಡುವ ಸಾಧ್ಯತೆಗಳಿವೆ.

ಈ ನಡುವೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸ್ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದೆ. ಸರ್ಕಾರದ ಮಟ್ಟದಲ್ಲಿ ಇಂತದ್ದೆ ದಿನದಿಂದ ಕಟ್ಟು ನಿಟ್ಟಿನ ಆದೇಶ ಜಾರಿಗೆ ಬರಲಿದೆ ಎಂಬ ಕಟ್ಟಾಜ್ಞೆ ಬಾರದಿದ್ದರೂ ಸಹ ಕಾನೂನು ರೀತ್ಯಾ ಜನವರಿ 12 ರಿಂದ ಜಾರಿಗೆ ಬಂದಿರುವುದನ್ನು ಪೊಲೀಸ್ ಇಲಾಖೆ ಖಚಿತಪಡಿಸಿದೆ.

ಸರ್ಕಾರ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯವಾಗಿದ್ದು, ವಾಹನ ಸವಾರ ಮತ್ತು ಹಿಂಬದಿ ಸವಾರ ನಿಯಮ ಉಲ್ಲಂಘಿಸಿದಂತೆ ಎಚ್ಚರವಹಿಸಬೇಕಾಗಿದೆ. ಹಾಗೊಂದು ವೇಳೆ ಪೊಲೀಸ್ ಇಲಾಖೆ ಸಮಯಾವಕಾಶ ನೀಡಿ ಜಾಗೃತಿ ಮೂಡಿಸಿದ್ದಲ್ಲಿ ಅವರು ನೀಡುವ ಗಡುವಿನೊಳಗೆ ಹೆಲ್ಮೆಟ್ ಕಡ್ಡಾಯವನ್ನು ಪಾಲನೆ ಮಾಡುವುದು ಒಳಿತು. ತಪ್ಪಿದ್ದಲ್ಲಿ ಹೆಲ್ಮೆಟ್ ಧರಿಸಿದರೆ ಸಿಕ್ಕಿ ಬಿದ್ದರೆ ಮೊದಲ ಬಾರಿಗೆ ರು.100, ಎರಡನೇ ಬಾರಿಗೆ ರು.200 ಹಾಗೂ ಮೂರನೇ ಬಾರಿಗೆ ರು.300 ಮತ್ತು ಚಾಲನಾ ಪರವಾನಗಿಯನ್ನು ರದ್ದುಪಡಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಎಚ್ಚರಿಕೆ ನೀಡಿದೆ. ಹಿಂಬದಿ ಸವಾರ ಹೆಲ್ಮೆಟ್ ಹಾಕದೇ ಹೋದರೂ, ವಾಹನ ಸವಾರನಿಗೇ ದಂಡ ಬೀಳಲಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com