ಇಂಟರ್ ಪೋಲ್ ಬ್ಲ್ಯಾಕ್ ನೋಟಿಸ್‍ಗೆ ಭಾರತ ಮನವಿ

ಪಠಾಣ್‍ಕೋಟ್ ವಾಯುನೆಲೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ 6 ಮಂದಿ ಉಗ್ರರ ಪೈಕಿ ಇಬ್ಬರ ದೇಹ ಛಿದ್ರವಾಗಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಠಾಣ್‍ಕೋಟ್ ವಾಯುನೆಲೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ 6 ಮಂದಿ ಉಗ್ರರ ಪೈಕಿ ಇಬ್ಬರ ದೇಹ ಛಿದ್ರವಾಗಿದ್ದು, ಅವರ ಗುರುತು ಪತ್ತೆಗೆ ಬ್ಲ್ಯಾಕ್ ನೋಟಿಸ್ ಜಾರಿ ಮಾಡುವಂತೆ ಇಂಟರ್ ಪೋಲ್ ‍ಗೆ ಭಾರತ ಸರ್ಕಾರ ಸೋಮವಾರ ಕೇಳಿಕೊಂಡಿದೆ. ರುತು ಪತ್ತೆಯಾಗದ ಅಥವಾ ಸುಳ್ಳು ದಾಖಲೆಗಳನ್ನು ಹೊಂದಿರುವ ಮೃತದೇಹಗಳ ಪತ್ತೆಗೆ ಬ್ಲ್ಯಾಕ್ ನೋಟಿಸ್ ನೆರವಾಗಲಿದೆ. 
ಮೃತದೇಹಗಳ ಫೋಟೋ, ಬೆರಳಚ್ಚು ಹಾಗೂ ಅಲ್ಲಿ ಸಿಕ್ಕಿದ ಇತರೆ ಮಾಹಿತಿಗಳೊಂದಿಗೆ ಕೋರಿಕೆ ನೋಟಿಸ್ ಕಳುಹಿಸಲಾಗುತ್ತದೆ. ಇದೇ ವೇಳೆ, ದಾಳಿ ನಡೆದು ಒಂದು ವಾರದ ಬಳಿಕ ಶೋಧಕಾರ್ಯದ ವೇಳೆ ಒಂದು ಮೊಬೈಲ್ ಫೋನ್, ಬೈನಾಕ್ಯುಲರ್ ಮತ್ತು ಎಕೆ 47 ಮಾ್ಯಗಜಿನ್ ಪತ್ತೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 
ದಾಳಿ ನಡೆದಾಗಿನಿಂದಲೂ 10 ಮಂದಿ ಸದಸ್ಯರ ತಂಡವು ವಾಯುನೆಲೆಯಾದ್ಯಂತ ಶೋಧ ಕಾರ್ಯ ನಡೆಸುತ್ತಿದೆ. ಹಾನಿ ಮಾಡಿದವರು ನೋವು ತಿನ್ನುತ್ತಾರೆ: ``ಭಾರತಕ್ಕೆ ಹಾನಿ ಮಾಡಿದವರು ಖಂಡಿತಾ ಸ್ವತಃ ನೋವು ತಿಂದೇ ತಿನ್ನುತ್ತಾರೆ. ಆದರೆ, ಎಲ್ಲಿ, ಯಾವಾಗ, ಹೇಗೆ ಎಂಬುದನ್ನು ನಾವೇ ನಿರ್ಧರಿಸುತ್ತೇವೆ.'' ಇಂತಹುದೊಂದು ಎಚ್ಚರಿಕೆ ಕೊಟ್ಟಿದ್ದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್. ಸೋಮವಾರ 68ನೇ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸೇನಾಧಿಕಾರಿಗಳ ನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. 
``ನಮ್ಮ ದೇಶಕ್ಕೆ ಯಾವುದಾದರೂ ವ್ಯಕ್ತಿ ಅಥವಾ ಸಂಘಟನೆ ಹಾನಿ ಮಾಡಿದರೆ, ಅವರು ಕೂಡ ಅಂತಹುದೇ ನೋವನ್ನು ಉಣ್ಣುತ್ತಾರೆ. ಆ ನೋವು ಅವರನ್ನು ತಲುಪುವವರೆಗೂ, ಅವರು ನಮಗೆ ನೋವು ಕೊಡುತ್ತಿರುತ್ತಾರೆ'' ಎಂದಿದ್ದಾರೆ ಪರ್ರಿಕರ್. ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಅವರು, ``ಯಾರು ನಿಮಗೆ ನೋವುಂಟು ಮಾಡುತ್ತಾರೋ, ಅವರಿಗೆ ಅದೇಥರ ನೋವಾದಾಗಾಲೇ ಅವರು ಬದ ಲಾಗುತ್ತಾರೆ ಎಂಬುದನ್ನು ಚರಿತ್ರೆಯೇ ಹೇಳಿದೆ'' ಎಂದಿದ್ದಾರೆ. 
ಎನ್‍ಐಎ ಮುಂದೆ ಹಾಜರು: ಉಗ್ರರಿಂದ ಅಪಹರಣಕ್ಕೀಡಾಗಿದ್ದೆ ಎಂದಿದ್ದ ಗುರುದಾಸ್‍ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಮುಂದೆ ಹಾಜರಾಗಿದ್ದಾರೆ. ಅವರ ಹೇಳಿಕೆಗಳಲ್ಲಿ ಗೊಂದಲಗಳಿದ್ದ ಹಿನ್ನಲೆಯಲ್ಲಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಪಠಾಣ್‍ಕೋಟ್ ದಾಳಿಯ ಮುನ್ನಾದಿನದ ಬೆಳವಣಿಗೆಗಳ ಬಗ್ಗೆ ಎನ್‍ಐಎ ವಿಚಾರಣೆ ನಡೆಸಿದೆ. ಜತೆಗೆ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಪಾಕ್‍ನ 3 ಕಡೆ ದಾಳಿ ಹಲವರ ಬಂಧನ
ಪಠಾಣ್‍ಕೋಟ್ ದಾಳಿಗೆ ಸಂಬಂಧಿಸಿ ಪಾಕಿ-ಸ್ತಾನ ತನಿಖೆ ಚುರುಕುಗೊಳಿಸಿದೆ. ಸೋಮವಾರ ಪಾಕ್‍ನ ತನಿಖಾಧಿಕಾರಿಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಹಲವರನ್ನು ಬಂಧಿಸಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಪಾಕಿಸ್ತಾನದ ಗುಜ್ರಾನ್‍ವಾಲಾ, ಜೇಲಂ, ಬಹವಾಲ್ಪುರ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಇದೇ ವೇಳೆ, ಪ್ರಧಾನಿ ನವಾಜ್ ಷರೀಫ್ ಪಠಾಣ್‍ಕೋಟ್ ದಾಳಿಗೆ ಸಂಬಂಧಿಸಿ ಹೈ ಪ್ರೊಫೈಲ್ ಜಂಟಿ ತನಿಖಾ ತಂಡ ರಚಿಸಲು ಆದೇಶಿಸಿದ್ದಾರೆ. ಈ ತಂಡ ದಲ್ಲಿ ಗುಪ್ತಚರ ಸಂಸ್ಥೆ, ಇಂಟರ್-ಸರ್ವಿಸ್ ಇಂಟೆಲಿಜನ್ಸ್(ಐಎಸ್‍ಐ), ಸೇನಾ ಗುಪ್ತಚರ ಅಧಿಕಾರಿಗಳು ಇರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com