ಎಸ್ ಆರ್ ನಾಯಕ್ ಹೆಸರಿಗೆ ಹೆಗ್ಡೆ ತಕರಾರು

ನ್ಯಾ. ಎಸ್.ಆರ್ ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವುದಕ್ಕೆ ವಿರೋಧಿಸುವವರ ಸಾಲಿಗೆ ಇದೀಗ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ದನಿಗೂಡಿಸಿದ್ದಾರೆ...
ನಿವೃತ್ತ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಮತ್ತು ಸಂತೋಷ್ ಹೆಗ್ಡೆ (ಸಂಗ್ರಹ ಚಿತ್ರ)
ನಿವೃತ್ತ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಮತ್ತು ಸಂತೋಷ್ ಹೆಗ್ಡೆ (ಸಂಗ್ರಹ ಚಿತ್ರ)

ಬೆಂಗಳೂರು: ನ್ಯಾ. ಎಸ್.ಆರ್ ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವುದಕ್ಕೆ ವಿರೋಧಿಸುವವರ ಸಾಲಿಗೆ ಇದೀಗ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ದನಿಗೂಡಿಸಿದ್ದಾರೆ.

ಆರೋಪ ಕೇಳಿ ಬಂದವರನ್ನು ಈ ಹುದ್ದೆಗೆ ನೇಮಕ ಮಾಡಬಾರದು, ಅಲ್ಲದೆ ಇದಕ್ಕೆ ಕನ್ನಡಿಗರನ್ನೇ ನೇಮಕ ಮಾಡಬೇಕು ಎಂಬ ವಾದವೂ ತಪ್ಪು ಎಂದು ಅವರು ಹೇಳಿದ್ದಾರೆ. ಇದೇ ವೇಳೆ,  ಎಸ್.ಆರ್. ನಾಯಕ್ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಗುರುವಾರ ರಾಜ್ಯಪಾಲರಿಗೆ ದೂರು ನೀಡಿದೆ. ನಿಯಮಗಳನ್ನು ಉಲ್ಲಂಘಿಸಿ ನ್ಯಾಯಾಂಗ ಬಡಾವಣೆಯಲ್ಲಿ ಅವರು ನಿವೇಶನ  ಪಡೆದಿದ್ದಾರೆ. ಹೀಗಾಗಿ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದೆ.

ನ್ಯಾ. ಎಸ್.ಆರ್. ನಾಯಕ್ ವಿರುದ್ಧ ಆರೋಪಗಳು ಕೇಳಿ ಬಂದಾಗ ಆ ಹುದ್ದೆಗೆ ಅವರನ್ನು ನೇಮಕ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಸ್ಥಾನಕ್ಕೆ ಅರ್ಹರಾದ ಎಷ್ಟೋ ನಿವೃತ್ತ  ನ್ಯಾಯಮೂರ್ತಿಗಳು ಇದ್ದಾರೆ. ಕಳಂಕ ರಹಿತರು ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಬೇಕು. ನ್ಯಾ. ನಾಯಕ್ ಅವರೂ ತಮ್ಮ ಮೇಲೆ ಆರೋಪ ಬಂದಾಗ ಆ ಸ್ಥಾನಕ್ಕೆ ಒಪ್ಪಿಕೊಳ್ಳುವುದು  ಸೂಕ್ತವಲ್ಲ ಎಂಬುದು ನ್ಯಾ.ಸಂತೋಷ್ ಹೆಗ್ಡೆ ಅವರ ಅಭಿಪ್ರಾಯ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಸ್ಥಾನಕ್ಕೆ ಕರ್ನಾಟಕದವರನ್ನೇ ನೇಮಕ ಮಾಡಬೇಕು ಎಂಬ ಸರ್ಕಾರದ  ವಾದ ಸರಿಯಲ್ಲ. ಲೋಕಾ ಸಂಸ್ಥೆ ಆರಂಭವಾದಾಗ ಬೇರೆ ರಾಜ್ಯದ ನ್ಯಾಯಮೂರ್ತಿಗಳು ನೇಮಕವಾಗಿದ್ದರು.

ನಮಗೆ ಬೇಕಾಗಿರುವುದು ಪ್ರಾಮಾಣಿಕ, ದಕ್ಷ ಲೋಕಾಯುಕ್ತರೇ ಹೊರತು, ಕನ್ನಡಿಗ ಎನ್ನುವ ಲೋಕಾಯುಕ್ತ ಅಲ್ಲ. ರಾಜ್ಯದ ವರನ್ನೇ ನೇಮಿಸುವ ಕುರಿತು ಮುಂದಿನ ದಿನಗಳಲ್ಲಿ ಸರ್ಕಾರ  ಚಿಂತಿಸಬಹುದು ಎಂದು ಸಲಹೆ ನೀಡಿದರು. ಲೋಕಾಯುಕ್ತ ಸಂಸ್ಥೆಯ ಕಾನೂನಿಗೆ 2014ರಲ್ಲಿ ತಿದ್ದುಪಡಿ ತಂದಿದ್ದು, ಜನಪ್ರತಿನಿಧಿಗಳನ್ನು ಲೋಕಾಯುಕ್ತ ಸಂಸ್ಥೆ ಅಡಿಯಲ್ಲಿ ವಿಚಾರಣೆಗೆ  ಒಳಪಡಿಸದಂತೆ ಮಾಡಿದ್ದಾರೆ. ಸಂಸ್ಥೆಯನ್ನು ದುರ್ಬಲಗೊಳಿಸುವುದೇ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಒಂದೊಂದೇ ಹಂತದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ  ಯತ್ನಗಳು ನಡೆಯುತ್ತಿವೆ ಎಂದು ನ್ಯಾ. ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ನಾಯಕ್ ಹೆಸರು ಒಪ್ಪಬೇಡಿ: ನಿಯಮಗಳನ್ನು ಉಲ್ಲಂಘಿಸಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ನ್ಯಾ. ಎಸ್.ಆರ್.ನಾಯಕ್ ಅವರನ್ನು  ಲೋಕಾಯುಕ್ತ ಹುದ್ದೆಗೆ ಪರಿಗಣಿಸಬಾರದು, ಒಂದು ವೇಳೆ ಸರ್ಕಾರದಿಂದ ಅವರ ಹೆಸರು ಶಿಫಾರಸುಗೊಂಡರೆ ಅದನ್ನು ತಿರಸ್ಕರಿಸಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಗುರುವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟಾಚಾರ ಸಂಸ್ಥೆಯನ್ನಾಗಿ ಮಾಡಬಾರದು. ಹುದ್ದೆಗೇರಿ ಆರೋಪ ಸಾಬೀತಾದ ನಂತರ ರಾಜಿನಾಮೆ ನೀಡುವುದು ಬೇಡ.  ಮಾಜಿ ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರ ಸ್ಥಿತಿ ಮತ್ತೆ ಮರುಕಳಿಸಬಾರದು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಸಮಯವೂ ವ್ಯರ್ಥವಾಗುತ್ತದೆ ಎಂದು ಪರಿಷತ್‍ನ ಅಧ್ಯಕ್ಷ ಆದರ್ಶ ಅಯ್ಯರ್, ಪ್ರಕಾಶ್ ಬಾಬು, ವಿಶ್ವನಾಥ ವಿ.ಬಿ. ರಾಜೇಶ್ ಕುಮಾರ್, ನಾರಾಯಣ, ಜಯರಾಮ ಭಟ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ಎಸ್. ಆರ್.ನಾಯಕ್ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬೈಲಾ ಉಲ್ಲಂಘಿಸಿ ಬೆಂಗಳೂರು ಉತ್ತರ ತಾಲೂಕಿನ  ಯಲಹಂಕ ಹೋಬಳಿಯ ಅಳ್ಳಾಲಸಂದ್ರದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪವಿದೆ. ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸುವ ಮುನ್ನವೇ  ಅಂದರೆ 1990ರಲ್ಲಿಯೇ ಎಸ್. ಆರ್.ನಾಯಕ್, ಪತ್ನಿ ಶಾಲಿನಿ ನಾಯಕ್ ಹೆಸರಿನಲ್ಲಿ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಬಿಡಿಎ ನಿವೇಶನ ಪಡೆದಿದ್ದಾರೆ. ಜತೆಗೆ 2001ರಲ್ಲಿ ಆರ್‍ಎಂವಿ ಲೇಔಟ್‍ನ  2ನೇ ಬ್ಲಾಕ್‍ನಲ್ಲಿ 10,200ಚದರಡಿಯ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ನಿವೇಶನ ಹಾಗೂ ಗಂಗಮ್ಮನಗುಡಿಯ ಜಾರಕಿಬಂಡೆ ಕಾವಲಿನಲ್ಲಿ ಒಂದು ನಿವೇಶನ ಹೊಂದಿದ್ದಾರೆ. ಆದರೂ  ನಿಯಮ ಬಾಹಿರವಾಗಿ ನಿವೇಶನ ಖರೀದಿಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com