ಇನ್ನು ಚಾಕಲೇಟ್ ಸಿಗಲ್ಲ ದಂಡ ಕಟ್ಟದಿದ್ರೆ ಬಿಡಲ್ಲ

ಹೆಲ್ಮೆಟ್ ಧರಿಸದಿದ್ರೆ ಪೊಲೀಸರು ಇನ್ನು ಚಾಕಲೇಟ್ ಕೊಡಲ್ಲ, ಆದರೆ, ದಂಡ ಕೊಡುವ ತನಕ ನಿಮ್ಮನ್ನು ಬಿಡಲ್ಲ! ಏಕೆಂದರೆ, ಸುಪ್ರಿಂ ಸೂಚನೆ ಮೇರೆಗೆ ಜ.12ರಿಂದ ರಾಜ್ಯಾದ್ಯಂತ ಜಾರಿಗೆ ಬಂದ ದ್ವಿಚಕ್ರ ವಾಹನ...
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ (ಸಂಗ್ರಹ ಚಿತ್ರ)
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ (ಸಂಗ್ರಹ ಚಿತ್ರ)

ಬೆಂಗಳೂರು: ಹೆಲ್ಮೆಟ್ ಧರಿಸದಿದ್ರೆ ಪೊಲೀಸರು ಇನ್ನು ಚಾಕಲೇಟ್ ಕೊಡಲ್ಲ, ಆದರೆ, ದಂಡ ಕೊಡುವ ತನಕ ನಿಮ್ಮನ್ನು ಬಿಡಲ್ಲ! ಏಕೆಂದರೆ, ಸುಪ್ರಿಂ ಸೂಚನೆ ಮೇರೆಗೆ ಜ.12ರಿಂದ ರಾಜ್ಯಾದ್ಯಂತ  ಜಾರಿಗೆ ಬಂದ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ನಿಯಮ, ಬುಧವಾರದಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.

ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ದ್ವಿಚಕ್ರ ವಾಹನ ಸವಾರರಿಗೂ ದಂಡ ವಿಧಿಸಲು ಈಗಾಗಲೇ ಸಂಚಾರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ನಿಯಮ ಜಾರಿಗೆ ಬಂದ ಏಳು ದಿನ  ಕಳೆದಿದ್ದರೂ, ಸವಾರರಲ್ಲಿ ಅರಿವು ಮೂಡಿಸಲು ದಂಡ ಕ್ರಮಕ್ಕೆ ಕೊಂಚ ಬ್ರೇಕ್ ನೀಡಲಾಗಿತ್ತು. ಇದೀಗ ಪೊಲೀಸರು ನೀಡಿದ್ದ ಗಡುವು ಮುಕ್ತಾಯವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ 12  ವರ್ಷ ಮೇಲ್ಪಟ್ಟ ಮಕ್ಕಳೂ ಸೇರಿದಂತೆ ಎಲ್ಲರೂ ಹೆಲ್ಮೆಟ್ ಧರಿಸಬೇಕು. ಇಲ್ಲ ದಿದ್ದರೆ ಅನಿವಾರ್ಯವಾಗಿ ದಂಡ ಕಟ್ಟಲೇಬೇಕು.

ದೆಹಲಿ, ತೆಲಂಗಾಣ, ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವ ನಿಯಮ ಜಾರಿಯಲ್ಲಿದೆ. ಹೀಗಾಗಿ ರಾಜ್ಯದಲ್ಲೂ ಜಾರಿಯಾಗಿದೆ. ಸುಪ್ರಿಂ ಕೋರ್ಟ್ ಸ್ಪಷ್ಟ ನಿರ್ದೇಶನವಿರುವುದರಿಂದ ನಿಯಮ ಪಾಲನೆ ಅನಿವಾರ್ಯವಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ಚಾಲಕನಿಗೆ ದಂಡ ವಿಧಿಸಲಾಗುತ್ತದೆ. ಮೊಲದ ಬಾರಿ  ಸಿಕ್ಕಿ ಬಿದ್ದರೆ ರು.100, ಎರಡನೇ ಬಾರಿ ರು.200 ಮೂರನೇ ಬಾರಿ ರು.300 ದಂಡ ವಿಧಿಸಲಾಗುತ್ತದೆ. 4ನೇ ಬಾರಿಯೂ ಸಿಕ್ಕಿ ಬಿದ್ದರೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗುವುದು  ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಾದ ದಿನದಿಂದ ಕೆಲ ಸವಾರರು ಹೆಲ್ಮೆಟ್ ಖರೀದಿಗೆ ಮುಂದಾಗಿದ್ದರು. ಏಳು ದಿನಗಳ ಕಾಲಾವಕಾಶದಲ್ಲಿ ಹೆಲ್ಮೆಟ್ ವ್ಯಾಪಾರ ಕೊಂಚ ಬಿರುಸಿನಿಂದ ಕೂಡಿತ್ತು. ಆದರೆ, ಕೆಲವರು ಕಡಿಮೆ ಗುಣಮಟ್ಟದ ಹೆಲ್ಮೆಟ್  ಖರೀಸಿದ್ದಾರೆ. ಕೆಲವೇ ಕೆಲವು ಮಂದಿ ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಖರೀಸಿದ್ದಾರೆ. ನಿಯಮದ ಪ್ರಕಾರ  ಸವಾರರು ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಈ ನಿಯಮ ಯಾವ ಮಟ್ಟಕ್ಕೆ ಪಾಲನೆಯಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ದ್ವಿಚಕ್ರ ವಾಹನ ಸವಾರರು
ಸುರಕ್ಷತೆ ದೃಷ್ಟಿಯಿಂದ  ಹೆಲ್ಮೆಟ್ ಧರಿಸಬೇಕು. ಇಲ್ಲವಾದರೆ ದಂಡ ಕಟ್ಟುವುದು ಅನಿವಾರ್ಯ. ಹಿಂಬದಿ ಸವಾರರು ಹೆಲ್ಮೆಟ್ ಧರಿಸುವ  ಸಂಬಂಧ ಒಂದು ವಾರಗಳ ಕಾಲ ಸವಾರರಲ್ಲಿ ಅರಿವು  ಹಾಗೂ ಜಾಗೃತಿ ಮೂಡಿಸಲಾಗಿದೆ.
-ಡಾ.ಎಂ ಎ ಸಲೀಂ, ಹೆಚ್ಚುವರಿ(ಸಂಚಾರ)ಪೊಲೀಸ್ ಆಯುಕ್ತ

ಸುಪ್ರಿಂಕೋರ್ಟ್ ನಿರ್ದೇಶನದ ಮೇರೆಗೆ ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಳಿಸಿದೆ. ಈ ನಿಯಮವನ್ನು ಸಮರ್ಥವಾಗಿ ಜಾರಿಗೆ  ತರುವಲ್ಲಿ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸಲಾಗುವುದು.
-ಡಾ ಜಿ ಪರಮೇಶ್ವರ್, ಗೃಹ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com