ಲೋಕಾ ಆಯ್ಕೆ: 25ಕ್ಕೆ ಮತ್ತೆ ಸಭೆ, ಸರ್ಕಾರಕ್ಕೆ ನ್ಯಾ.ಸೇನ್ ಪತ್ರ ಬರೆದಿಲ್ಲ ಎಂದ ಸಿಎಂ

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಿಂದ ನ್ಯಾ. ಭಾಸ್ಕರರಾವ್ ರಾಜಿನಾಮೆಯಿಂದ ತೆರವಾದ ಲೋಕಾಯುಕ್ತ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಸಂಬಂಧ ಇದೇ ಜ.25ರಂದು ಸಭೆ ಕರೆಯಲಾಗಿದೆ...
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಿಂದ ನ್ಯಾಯಮೂರ್ತಿ ಭಾಸ್ಕರರಾವ್ ಅವರ ರಾಜಿನಾಮೆಯಿಂದ ತೆರವಾದ ಲೋಕಾಯುಕ್ತ ಸ್ಥಾನಕ್ಕೆ ಹೊಸಬರನ್ನು  ನೇಮಿಸುವ ಸಂಬಂಧ ಇದೇ ಜನವರಿ 25ರಂದು ಸಭೆ ಕರೆಯಲಾಗಿದೆ.

ಲೋಕಾಯುಕ್ತ ನ್ಯಾಯಮೂರ್ತಿ ನೇಮಕಕ್ಕೆ ಸಂಬಂಧಿಸಿದಂತೆ ಜನವರಿ 25ರಂದು ಮತ್ತೊಮ್ಮೆ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಬುಧವಾರ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಸಮಾಲೋಚನಾ ಸಭೆ ನಡೆಸಿ ನ್ಯಾ. ಎಸ್.ಆರ್.ನಾಯಕ್ ಅಥವಾ ನ್ಯಾ.ವಿಕ್ರಂಜಿತ್ ಸೇನ್  ಅವರನ್ನು ನೇಮಕ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಸಮಾಲೋಚನೆ ಸಭೆಯ ನಡಾವಳಿ ಇಲ್ಲ ಎಂಬ ಕಾನೂನು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ  ಮತ್ತೊಮ್ಮೆ ನಿಯಮಾವಳಿಗಳ ಅನ್ವಯ ಜನವರಿ 25ರಂದು ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ನ್ಯಾ.ವಿಕ್ರಂಜಿತ್ ಸೇನ್ ಪತ್ರ ಬರೆದಿಲ್ಲ
ಇದೇ ವೇಳೆ ನ್ಯಾ.ವಿಕ್ರಂಜಿತ್ ಸೇನ್ ಪತ್ರ ವಿವಾದ ಕುರಿತಂತೆ ಮಾತನಾಡಿದ ಅವರು, ಲೋಕಾಯುಕ್ತ ಹುದ್ದೆ ಒಪ್ಪಲು ಅಸಮ್ಮತಿ ಸೂಚಿಸಿ ನ್ಯಾ.ವಿಕ್ರಂಜಿತ್ ಸೇನ್ ಸರ್ಕಾರಕ್ಕೆ ಯಾವುದೇ ಪತ್ರ  ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಜಂಟಿ ಅಧಿವೇಶನದ ತೀರ್ಮಾನ ಸಾಧ್ಯತೆ
ಇದೇ ವೇಳೆ ಜನವರಿ 25ರಂದು ನಡೆಯಲಿರುವ ಉನ್ನತ ಮಟ್ಟದ ಸಭೆ ವೇಳೆಯಲ್ಲಿಯೇ ವಿಧಾನಮಂಡಲ ಜಂಟಿ ಅಧಿವೇಶನವನ್ನು ಯಾವಾಗ ಆರಂಭಿಸಬೇಕು ಹಾಗೂ ಎಷ್ಟು ದಿನ ಅಧಿವೇಶನ  ನಡೆಸಬೇಕು ಎಂಬ ಕುರಿತು ಚರ್ಚಿಸಲಾಗುತ್ತದೆ. ಆದರೆ ಅಧಿವೇಶನವನ್ನು ತಾಪಂ, ಜಿಪಂ ಚುನಾವಣೆ ಬಳಿಕವೇ ಮಾಡಲಾಗುತ್ತದೆ ಎಂದು ಎಂದು ಸಿಎಂ ತಿಳಿಸಿದರು.

ಐಸಿಯು ತೆರಿಗೆ ವಾಪಸ್
ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ವಿಲಾಸಿ ತೆರಿಗೆ ವಿಧಿಸಲು ಹೊರಡಿಸಿರುವ ಸುತ್ತೋಲೆ ಹಿಂಪಡೆಯಲಾಗಿದೆ. ಒಂದು ಸಾವಿರಕ್ಕಿಂತ ಹೆಚ್ಚು ಶುಲ್ಕದ ಸಲಕರಣೆ ಬಳಸುವುದಕ್ಕೆ  ವಿಲಾಸಿ ತೆರಿಗೆ ವಿಧಿಸಲು ಅವಕಾಶವಿತ್ತು. ಅದರಂತೆ ಈ ಸಂಬಂಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಆದರೆ, ಐಸಿಯುಗಳಲ್ಲಿ ಬಡವರು ಚಿಕಿತ್ಸೆ ಪಡೆಯುವ ಕಾರಣ ಹೊರೆಯಾಗಬಾರದು  ಎಂಬ ಕಾರಣಕ್ಕೆ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com