ಅಹಮದಾಬಾದ್: ಗುಜರಾತ್ ಪೊಲೀಸರು ದೇಶದ್ರೋಹ ಆರೋಪದ ಮೇಲೆ ಬಂಧಿಸಿರುವ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಅಧ್ಯಕ್ಷ ಹಾರ್ದಿಕ್ ಪಟೇಲ್ ಶನಿವಾರ ಗುಜರಾತ್ ಕೋರ್ಟ್ ನಲ್ಲಿ ನೂತನ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಉಚ್ಛ ಜಾತಿಯಾದ ಪಟೇಲ್ ಸಮುದಾಯಕ್ಕೆ ಹಿಂದುಳಿದ ಸಮುದಾಯದಡಿ ಮೀಸಲಾತಿ ಕೋರಿ ನಾಲ್ಕು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಹಾರ್ದಿಕ್ ಪಟೇಲ್ ಅವರನ್ನು ಕೆಲವು ತಿಂಗಳ ಹಿಂದೆಯಷ್ಟೇ ಬಂಧಿಸಲಾಗಿತ್ತು.
ಮೀಸಲಾತಿಗಾಗಿ ಪ್ರತಿಭಟನೆ ಕಾನೂನು ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ನೂತನ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.
೨೭೦೦ ಪುಟಗಳ ದೇಶದ್ರೋಹ ಪ್ರಕರಣದ ಎಫ್ ಐ ಆರ್ ಸುಳ್ಳು ಮಾಹಿತಿಯಿಂದ ಕೂಡಿದ್ದು, ಇದು ಪ್ರತಿಭಟನೆಯನ್ನು ಹತ್ತಿಕ್ಕಲು ಮಾಡಿರುವ ರಾಜಕೀಯ ತಂತ್ರ ಎಂದು ಕೂಡ ವಕೀಲ ರಫೀಕ್ ಲೋಖಂಡವಾಲಾ ವಾದಿಸಿದ್ದಾರೆ.
ಹಾರ್ದಿಕ್ ಪಟೇಲ್ ಅವರನ್ನು ಸೂರತ್ ಜಿಲ್ಲೆಯ ಲಜಪೋರ್ ಜೈಲಿನಲ್ಲಿ ಬಂಧಿಸಿಡಲಾಗಿದೆ.