
ಬೆಂಗಳೂರು: ಫ್ರಾನ್ಸ್ ಅಧ್ಯಕ್ಷ ಒಲಾಂದ್ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿಗೆ ಬಂದಿದ್ದ ಬೆದರಿಕೆ ಪತ್ರದ ರಹಸ್ಯ ಇದೀಗ ಬಯಲಾಗಿದೆ. ಇತ್ತೀಚೆಗೆ ಬಂಧಿಸಲಾಗಿರುವ ಶಂಕಿತ ಉಗ್ರ ಜಾವೇದ್ ರಫೀಕ್ ನೇ ಈ ಬೆದರಿಕೆ ಪತ್ರ ಬರೆದಿರುವುದು ವಿಚಾರಣೆಯಲ್ಲಿ ಹೊರಬಿದ್ದಿದೆ.
ವಸಂತನಗರದಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಗೆ ಬಂದ ಈ ಅನಾಮಧೇಯ ಬೆದರಿಕೆ ಪತ್ರ ಬೆಂಗಳೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಪತ್ರ ಬಂದ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಸಂಘಟಿಸಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು.
ಆರೋಪಿಗಳ ಬಂಧನದಿಂದ ಬೆಚ್ಚಿಬಿದ್ದಿದ್ದ ರಾಜ್ಯದ ಜನತೆಗೆ ಒಂದೇ ದಿನದ ಅಂತರದಲ್ಲಿ ತೆಲಂಗಾಣ ಎಟಿಎಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಶಂಕಿತ ಉಗ್ರ ರಫೀಕ್ ನನ್ನು ಮಡಿವಾಳದಲ್ಲಿ ಬಂಧಿಸಿ ಅಚ್ಚರಿ ಮೂಡಿಸಿದ್ದರು.
ಬಾಯ್ಬಿಟ್ಟ ಆರೋಪಿ
ಬೆಂಗಳೂರಿನಲ್ಲಿರುವ ಇಸ್ರೇಲ್ ವೀಸಾ ವಿಲೇವಾರಿ ಕಚೇರಿಗೆ ಕಳೆದ ನವೆಂಬರ್ 29ರ ರಾತ್ರಿ ಬೆಂಕಿ ಇಟ್ಟಿದ್ದು ನಾನೇ ಎಂದು ರಫೀಕ್ ಬಾಯ್ಬಿಟ್ಟಿರುವುದಾಗಿಯೂ ತಿಳಿದುಬಂದಿದೆ. ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನಲಾಗಿರುವ ರಫೀಕ್, ರಾಜ್ಯದಲ್ಲಿ ಐಎಸ್ ಉಗ್ರ ಸಂಘಟನೆ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೂ ಈತನಿಗೂ ಸಂಬಂಧ ಇರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
Advertisement