ಉಗ್ರ ದಾಳಿ ಭೀತಿ: ಬಿಗಿ ಭದ್ರತೆ ನಡುವೆ ಪವಿತ್ರ ರಂಜಾನ್ ಪ್ರಾರ್ಥನೆ

ಪವಿತ್ರ ರಂಜಾನ್ ಗೆ ಉಗ್ರರ ದಾಳಿ ಭೀತಿ ಇರುವ ಹಿನ್ನಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ನಡುವೆ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ...
ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ (ಸಂಗ್ರಹ ಚಿತ್ರ)
ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ (ಸಂಗ್ರಹ ಚಿತ್ರ)

ಬೆಂಗಳೂರು: ಪವಿತ್ರ ರಂಜಾನ್ ಗೆ ಉಗ್ರರ ದಾಳಿ ಭೀತಿ ಇರುವ ಹಿನ್ನಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ನಡುವೆ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ  ಸಲ್ಲಿಸಲಾಗುತ್ತಿದೆ.

ಇಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಆರಂಭವಾಗಿದ್ದು, ದೆಹಲಿ, ಕೋಲ್ಕತಾ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಸಾಮೂಹಿಕ ಪ್ರಾರ್ಥನೆ  ಸಲ್ಲಿಸಲಾಗುತ್ತಿದೆ. ಇನ್ನು ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಬೆಂಗಳೂರಿನ ಮೈಸೂರಿನ  ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಅಂತೆಯೇ ಶಿವಾಜಿನಗರ, ಸಿಟಿ ಮಾರುಕಟ್ಟೆ, ಸಿರ್ಸಿ ಸರ್ಕಲ್ ನಲ್ಲಿನ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ರಂಜಾನ್ ವಿಶೇಷ ಪ್ರಾರ್ಥನೆಗೆ ಉಗ್ರರು ದಾಳಿ ನಡೆಸುವ ಕುರಿತು  ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಹಿನ್ನಲೆಯ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಸಸ್ತ್ರ  ಮೀಸಲು, ಗೃಹ ರಕ್ಷಕ ದಳದ ಸಿಬ್ಬಂದಿ, ತುರ್ತು ಪ್ರಹಾರ ದಳ ಹಾಗೂ ಅಶ್ರುವಾಯು ದಳಗಳನ್ನು ನಿಯೋಜಿಸಲಾಗಿದೆ.

ವಿದೇಶದಲ್ಲೂ ರಂಜಾನ್ ಆಚರಣೆ
ಇನ್ನು ಭಾರತ ಮಾತ್ರವಲ್ಲದೇ ವಿಶ್ವದ ನಾನಾ ದೇಶಗಳಲ್ಲಿ ರಂಜಾನ್ ಆಚರಣೆ ಮಾಡಲಾಗಿದ್ದು, ಅಮೆರಿಕದ ನ್ಯೂಯಾರ್ಕ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವಿಶೇಷ  ಪ್ರಾರ್ಥನೆಗಾಗಿಯೇ ನ್ಯೂಯಾರ್ಕ್ ನ ಬ್ರೂಕ್ ಲೈನ್ ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಮುಸ್ಲಿಮರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.  ಇನ್ನು ಇಸಿಸ್ ಉಗ್ರರ ದಾಳಿ ಭೀತಿ ನಡೆವೆಯೂ ಸಿರಿಯಾ ಮತ್ತು ಇರಾಕ್ ನಲ್ಲೂ ಲಕ್ಷಾಂತರ ಮುಸ್ಲಿಮರು ಪವಿತ್ರ ರಂಜಾನ್ ಪ್ರಾರ್ಥನೆ ಸಲ್ಲಿಸಿದ್ದು, ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಪ್ರಧಾನಿ  ಅಶ್ರಫ್ ಘನಿ ಅವರು ಪ್ರಾರ್ಥನೆ ಸಲ್ಲಿಸಿದರು.

ಚೀನಾದ ಬೀಜಿಂಗ್, ಶಾಂಘೈ, ಬಾಂಗ್ಲಾದೇಶದ ಢಾಕಾ, ಶ್ರೀಲಂಕಾದ ಕೊಲಂಬೋದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇನ್ನು ಪ್ಯಾರಿಸ್ ನಲ್ಲಿ ಸೇನಾ ಪಡೆಗಳ ಬಿಗಿ ಭದ್ರತೆ ನಡುವೆ  ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com