ಹಠ ಬಿಡದಿದ್ದರೆ ಕೆಲಸದಿಂದಲೇ ವಜಾ: ಮುಷ್ಕರ ನಿರತ ಸಾರಿಗೆ ನೌಕರರಿಗೆ ಸಿಎಂ ಎಚ್ಚರಿಕೆ

ಸತತ 2ನೇ ದಿನಕ್ಕೆ ಕಾಲಿಟ್ಟಿರುವ ಸಾರಿಗೆ ನೌಕರರ ಮುಷ್ಕರವನ್ನು ಶತಾಯಗತಾಯ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸಂಜೆಯೊಳಗೆ ಕೆಲಸಕ್ಕೆ ವಾಪಸಾಗದಿದ್ದರೆ ಮುಷ್ಕರ ನಿರತ ನೌಕರರನ್ನು ಕೆಲಸದಿಂದಲೇ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಮುಷ್ಕರ (ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಮುಷ್ಕರ (ಸಂಗ್ರಹ ಚಿತ್ರ)

ಬೆಂಗಳೂರು: ಸತತ 2ನೇ ದಿನಕ್ಕೆ ಕಾಲಿಟ್ಟಿರುವ ಸಾರಿಗೆ ನೌಕರರ ಮುಷ್ಕರವನ್ನು ಶತಾಯಗತಾಯ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಸಂಜೆಯೊಳಗೆ  ಕೆಲಸಕ್ಕೆ ವಾಪಸಾಗದಿದ್ದರೆ ಮುಷ್ಕರ ನಿರತ ನೌಕರರನ್ನು ಕೆಲಸದಿಂದಲೇ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನೌಕರರ ನ್ಯಾಯಯುತ ಬೇಡಿಕೆ ಇಡೇರಿಸಲು ಸರ್ಕಾರ ಸಿದ್ಧವಿದೆ. ಆದರೆ ನೌಕರರು ಇಟ್ಟಿರುವಂತೆ ಶೇ.30ರಷ್ಟು  ಅವೈಜ್ಞಾನಿಕ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಶೇ.10ರಷ್ಚು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದ್ದು, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಸಾಧ್ಯವೇ ಇಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಂದು ವೇಳೆ ನೌಕರರು ತಮ್ಮ ಹಠ ಬಿಟ್ಟು ಕೆಲಸಕ್ಕೆ ವಾಪಸಾಗದಿದ್ದರೆ ಅಂತಹ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಲು ಸರ್ಕಾರ ಚಿಂತನೆ  ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

"ಮುಷ್ಕರದಿಂದ ಜನರಿಗೆ ಅನಾನುಕೂಲವಾಗುತ್ತಿರುವುದು ನಿಜ. ಈಗಾಗಲೇ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹಾಗಾಗಿ ಶೇ.8ರಿಂದ ಶೇ.10ಕ್ಕಿಂತಲೂ ವೇತನ ಹೆಚ್ಚಳ ಅಸಾಧ್ಯ ಎಂದು ತಿಳಿಸಿದ್ದಾರೆ.  ಲಾಭ ಮಾಡುವ ಉದ್ದೇಶ ಸಾರಿಗೆ ಇಲಾಖೆಗೆ ಇಲ್ಲ. ದಯವಿಟ್ಟು ನೌಕರರು ಹಠಮಾರಿ ಧೋರಣೆ ಬಿಟ್ಟು ಮುಷ್ಕರ ವಾಪಸ್ ಪಡೆಯಿರಿ" ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನಾ ನಿರತ ನೌಕರರ ವಿರುದ್ಧ ಸರ್ಕಾರದ "ವಜಾಸ್ತ್ರ" ಪ್ರಯೋಗ
ಈ ನಡುವೆ ಸಾರಿಗೆ ಮುಷ್ಕರವನ್ನು ಇಂದಿಗೇ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರಕ್ಕೆ ಬಂದಿದ್ದು, ಮುಷ್ಕರ ನಿರತ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಕಠಿಣ  ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಆರಂಭಿಕ ಹಂತವಾಗಿ ಪ್ರಸ್ತುತ ಮುಷ್ಕರದಿಂದ ವಾಪಸಾಗದ ತರಬೇತಿ ನೌಕರರನ್ನು ವಜಾಗೊಳಿಸಲಾಗುತ್ತಿದ್ದು, ಬಳಿಕ 2ನೇ  ಹಂತವಾಗಿ ಪ್ರಮುಖ ನೌಕರರನ್ನು ವಜಾಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇಂದು ಸಂಜೆಯಿಂದ ಸಾರಿಗೆ ಸಂಚಾರ ಆರಂಭ
ಮತ್ತೊಂದು ಮೂಲಗಳು ತಿಳಿಸಿರುವಂತೆ ಸರ್ಕಾರದ ಕಠಿಣ ನಿಲುವಿಗೆ ಬಗ್ಗಿರುವ ಸಾರಿಗೆ ನೌಕರರ ಒಕ್ಕೂಟಗಳು ಮುಷ್ಕರಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದು, ಇಂದು ಸಂಜೆ  ವೇಳೆ ಮುಷ್ಕರವನ್ನು ವಾಪಸ್ ಪಡೆದು ನೌಕರರು ಕೆಲಸಕ್ಕೆ ವಾಪಸಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇಂದು ಸಂಜೆ ವೇಳೆ ನಗರದ  ಬಹುತೇಕ ಪ್ರದೇಶಗಳಲ್ಲಿ ಮತ್ತೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com