ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಸಿಬ್ಬಂದಿ ಹಣಿಯಲು ಸರ್ಕಾರದ ಮಾಸ್ಚರ್ ಪ್ಲಾನ್!

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಟೋ, ಖಾಸಗಿ ವಾಹನಗಳ ದುಬಾರಿ ದರಗಳ ನಡುವೆಯೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಜನರು ಪ್ರಯಾಣ ಮಾಡುವಂತಾಗಿದೆ.
ಸಾರಿಗೆ ನೌಕರರ ಮುಷ್ಕರ (ಸಂಗ್ರಹ ಚಿತ್ರ)
ಸಾರಿಗೆ ನೌಕರರ ಮುಷ್ಕರ (ಸಂಗ್ರಹ ಚಿತ್ರ)

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಟೋ, ಖಾಸಗಿ  ವಾಹನಗಳ ದುಬಾರಿ ದರಗಳ ನಡುವೆಯೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಜನರು ಪ್ರಯಾಣ ಮಾಡುವಂತಾಗಿದೆ.

ನಿನ್ನೆ ಸಂಜೆ ವೇಳೆ ಸರ್ಕಾರಿ ಬಸ್ ಗಳ ಸೇವೆ ಪುನಾರಂಭವಾಗುವ ಮುನ್ಸೂಚನೆಯನ್ನು ಸರ್ಕಾರ ನೀಡಿತ್ತಾದರೂ, ಸಾರಿಗೆ ನೌಕರರ ಒಕ್ಕೂಟದೊಂದಿಗಿನ ಸಭೆ ವೈಫಲ್ಯದಿಂದಾಗಿ ಮುಷ್ಕರ  ಮುಂದುವರೆದಿದೆ. ಹೀಗಾಗಿ ಸತತ ಮೂರನೇ ದಿನಕ್ಕೆ ಮುಷ್ಕರ ಮುಂದುವರೆದಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ. ಇನ್ನು ನೌಕರರ ಮುಷ್ಕರ ಕೊನೆಗಾಣಿಸಲು ಸಿಎಂ  ಸಿದ್ದರಾಮಯ್ಯ ಎಸ್ಮಾ ಜಾರಿ ಮತ್ತು ನೌಕರರ ವಜಾ ಕುರಿತಂತೆ ಎಚ್ಚರಿಕೆ ನೀಡಿದ್ದರೂ ಕೂಡ ಇದಕ್ಕೆ ಬಗ್ಗದ ನೌಕರರು ಸರ್ಕಾರಕ್ಕೆ ಸಡ್ಡು ಹೊಡೆಯುವ ಮೂಲಕ ಮುಷ್ಕರ ಮುಂದವರೆಸಿದ್ದಾರೆ.

ಈ ಹಿನ್ನಲೆಯಲ್ಲಿ ಜನರು ದುಬಾರಿ ಪ್ರಯಾಣದರದ ನಡುವೆಯೇ ಮತ್ತೆ ಆಟೋ ಮತ್ತು ಖಾಸಗಿ ವಾಹನಗಳನ್ನು ಅವಲಂಭಿಸಿದ್ದಾರೆ. ಈ ನಡುವೆ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ  ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಮುಷ್ಕರದ ಮೊದಲ ದಿನಕ್ಕಿಂತ ಎರಡನೇ ದಿನ ಅತೀ ಹೆಚ್ಚು ಮಂದಿ ಪ್ರಯಾಣ ಮಾಡಿದ್ದಾರೆ. ಅಲ್ಲದೆ ಮೂರನೇ ದಿನವೂ ಕೂಡ ಮೆಟ್ರೋ  ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮೆಜೆಸ್ಟಿಕ್, ನಾಯಂಡಹಳ್ಳಿ ಮತ್ತು ಬೈಯ್ಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪ್ರಯಾಣಿಕರು ಸರತಿ  ಸಾಲಲ್ಲಿ ನಿಂತು ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದುದ್ದು ಸಾಮಾನ್ಯವಾಗಿತ್ತು.

ಮುಷ್ಕರ ಹಣಿಯಲು ಸರ್ಕಾರದ ಮಾಸ್ಟರ್ ಪ್ಲಾನ್
ಈ ನಡುವೆ ಸಾರಿಗೆ ನೌಕರರ ದಿಢೀರ್ ಮುಷ್ಕರದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜನರು ತೀವ್ರ ಪರಾದಾಟ ನಡೆಸುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರ ಯಶಸ್ವಿಯಾಗಿದೆಯಾದರೂ, ಕರಾವಳಿ ಭಾಗದಲ್ಲಿ ಮುಷ್ಕರ ಬಿಸಿ  ಜನರಿಗೆ ಅಷ್ಟಾಗಿ ತಟ್ಟಿಲ್ಲ. ಕಾರಣ ಈ ಭಾಗದಲ್ಲಿ ಸರ್ಕಾರ ಬಸ್ ಗಳಿಗಿಂತ ಖಾಸಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಮುಷ್ಕರ ಇಲ್ಲಿ  ಯಶಸ್ವಿಯಾಗಿಲ್ಲ.

ಇದನ್ನೇ ಮಾದರಿಯಾಗಿಸಿಕೊಂಡಿರುವ ಸರ್ಕಾರ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಖಾಸಗಿ ಬಸ್ ಗಳಿಗೆ ಅನುಮತಿ ನೀಡುವ ಕುರಿತು ಚಿಂತಿಸುತ್ತಿದೆ ಎಂದು  ಹೇಳಲಾಗುತ್ತಿದೆ. 60:40ರ ಅನುಪಾತದಲ್ಲಿ ಖಾಸಗಿ ಬಸ್ ಗಳಿಗೆ ನಗರದಲ್ಲಿ ಅನುಮತಿ ನೀಡಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಸರ್ಕಾರದ ಈ ಚಿಂತನೆ ಒಂದು ಕಾರ್ಯರೂಪಕ್ಕೆ  ಬಂದರೆ ಮಂಗಳೂರಿನಲ್ಲಿರವಂತೆ ಬೆಂಗಳೂರಿನಲ್ಲಿಯೂ ಖಾಸಗಿ ಬಸ್ ಗಳು ಪ್ರಾದೇಶಿಕ ಟ್ರಿಪ್ ಹೊಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com