
ನವದೆಹಲಿ: ಬ್ರೆಕ್ಸಿಟ್ ಫಲಿತಾಂಶದ ನಂತರ ಬ್ರಿಟನ್ ಕರೆನ್ಸಿ ಪೌಂಡ್ ನ ಮೌಲ್ಯ ಪಾತಾಳಕ್ಕಿಳಿದ ಪರಿಣಾಮ ಬ್ರಿಟನ್ ಹಾಗೂ ಯೂರೋಪ್ ಗೆ ಬೆಳೆಸುವ ಪ್ರಯಾಣ ದರ ಅಗ್ಗವಾಗಲಿದೆ.
ಐರೋಪ್ಯ ಒಕ್ಕೂಟದಿಂದ (ಇ.ಯು) ಬ್ರಿಟನ್ ಹೊರಗೆ ಇರಬೇಕು (ಬ್ರೆಕ್ಸಿಟ್) ಎಂದು ಅಲ್ಲಿನ ಜನರು ನಿನ್ನೆಯಷ್ಟೇ ತೀರ್ಪು ನೀಡಿದ್ದರು. ಜನಮತಗಣನೆಯ ಫಲಿತಾಂಶ ಬ್ರಿಟನ್ ನಲ್ಲಿ ಪ್ರಕಟಗೊಂಡಿದ್ದು, ಶೇ.51.9ರಷ್ಟು ಜನರು ಇ.ಯು ಒಕ್ಕೂಟದಿಂದ ಪ್ರತ್ಯೇಕವಾಗಬೇಕು ಎಂದು ಹೇಳಿದ್ದರು.
ಬ್ರಿಟನ್ ಜನತೆಯ ಈ ನಿರ್ಧಾರದಿಂದಾಗಿ ಶುಕ್ರವಾರ ಭಾರತ ಸೇರಿದಂತೆ ಹಲವು ದೇಶಗಳ ಷೇರುಪೇಟೆಯಲ್ಲಿನ ಬೆಳವಣಿಗೆಗಳು ಅಲ್ಲೋಲಕಲ್ಲೋಲವಾಗಿದೆ.
ಬ್ರೆಕ್ಸಿಟ್ ಫಲಿತಾಂಶದ ನಂತರ ಬ್ರಿಟನ್ ಕರೆನ್ಸಿ ಪೌಂಡ್ ನ ಮೌಲ್ಯ ಪಾತಾಳಕ್ಕಿಳಿದಿದ್ದು, ಡಾಲರ್ ಎದುರು ಪೌಂಡ್ ನ ಮೌಲ್ಯ 1.32ಕ್ಕೆ ಇಳಿದಿದೆ. ಇದು ಕಳೆದ 30 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮೌಲ್ಯವಾಗಿದೆ. ಈ ಹಿಂದೆ ಒಂದು ದಿನದಲ್ಲಿ ಯಾವತ್ತೂ ಪೌಂಡ್ ಮೌಲ್ಯ ಇಷ್ಟೊಂದು ಕಳೆದುಕೊಂಡಿರಲಿಲ್ಲ.
ಪೌಂಡ್ ಮೌಲ್ಯ ಇದೇ ರೀತಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದರೆ, ಬ್ರಿಟನ್ ಹಾಗೂ ಯುರೋಪ್ ದೇಶಗಳಿಗೆ ಪ್ರವಾಸ ಹೋಗುವುದು ಇನ್ನು ಮುಂದೆ ಅಗ್ಗವಾಗಲಿದೆ. ಪ್ರಸ್ತುತ 1 ಪೌಂಡ್ ನ ಬೆಲೆ ರು. 92.95ರಷ್ಚಿದೆ. ಈ ಹಿಂದೆ ರು.99.47ರಷ್ಟಿತ್ತು. ಸಾವಿರ ಪೌಂಡ್ ಗಳನ್ನು ಖರ್ಚು ಮಾಡಿದ್ದರೆ, ಇದರ ಬೆಲೆ ರು.6,520ರಷ್ಟಿರುತ್ತಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರುಪಾಯಿ ಮೌಲ್ಯದ ಮುಂದೆ ಪೌಂಡ್ ಮೌಲ್ಯ ಇದೇ ರೀತಿ ಕುಸಿಯುತ್ತಾ ಬಂದರೆ, ಬ್ರಿಟನ್ ಗೆ ಪ್ರವಾಸ ಹೋಗುವುದು ಭಾರತೀಯರಿಗೆ ಸುಲಭವಾಗುತ್ತದೆ. ಈ ರೀತಿಯಾಗಿ ಬೆಳವಣಿಗೆಗಳು ಮುಂದುವರೆದರೆ ಬ್ರಿಟನ್ ಹಾಗೂ ಯುರೋಪ್ ಗೆ ಪ್ರಯಾಣ ಬೆಳೆಸುವ ಭಾರತೀಯರ ಸಂಖ್ಯೆ ಕೂಡ ಹೆಚ್ಚಾಗುತ್ತದೆ ಎಂದು ಸಿಎಫ್ ಒ ಅನಿಲ್ ಖಾಂಡೆವಾಲ್ ಅವರು ಹೇಳಿದ್ದಾರೆ.
ಪೌಂಡ್ ಬೆಲೆ ಇದೇ ರೀತಿಯ ಕುಸಿಯುತ್ತಿದ್ದರೆ, ಬ್ರಿಟನ್ ನಲ್ಲಿ ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಬ್ರಿಟನ್ ನಲ್ಲಿ ಶಿಕ್ಷಣ ಪಡೆಯುವುದೂ ಕೂಡ ಅಗ್ಗವಾಗಲಿದೆ ಎಂದು ಯಾತ್ರ ಡಾಟ್ ಕಾಮ್ ನ ಅಧ್ಯಕ್ಷ ಶರತ್ ದಾಲ್ ಅವರು ಹೇಳಿದ್ದಾರೆ.
Advertisement