ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ: ಸಿದ್ದರಾಮಯ್ಯ
ಬೆಂಗಳೂರು: ರು. 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭವಾಗಿದ್ದು, ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ ಸಂಬಂಧ ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಸಿದ್ದರಾಮಯ್ಯ ಅವರು ಎತ್ತಿನ ಹೊಳೆ ಯೋಜನೆಗೆ ಈಗಾಗಲೇ ರು. 1800 ಕೋಟಿ ರುಪಾಯಿ ಹಣ ಖರ್ಚಾಗಿದೆ. ರು. 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭವಾಗಿದ್ದು, ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರೈತರ ಕುರಿತಂತೆ ಮಾತನಾಡಿದ ಅವರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ರೈತರ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ರೈತರ ಹೋರಾಟ ಹತ್ತಿಕ್ಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ನಾನು ಕೂಡ ರೈತ ಕುಟುಂಬದಿಂದಲೇ ಬಂದವನು. ಹೀಗಾಗಿ ರೈತರ ಮೇಲೆ ಯಾವುದೇ ರೀತಿಯಲ್ಲಿ ಬಲ ಪ್ರಯೋಗಿಸುವುದಿಲ್ಲ. ಕನಸಿನಲ್ಲೂ ಬಲ ಪ್ರಯೋಗದ ಬಗ್ಗೆ ಯೋಚಿಸುವುದಿಲ್ಲ ಎಂದು ರೈತ ಮುಖಂಡರಿಗೆ ಹೇಳಿದ್ದಾರೆ.
ಸಭೆ ವೇಳೆ ಪ್ರವೇಶ ನೀಡದ ಪೊಲೀಸರ ವಿರುದ್ಧ ರೈತರ ಆಕ್ರೋಶ
ಒಂದೆಡೆ ಎತ್ತಿನಹೊಳೆ ಯೋಜನೆ ಸಂಬಂಧ ಅಧಿಕಾರಿಗಳು ರೈತ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದರೆ, ಮತ್ತೊಂದೆಡೆ ರೈತರು ಪೊಲೀಸರು ಹಾಗೂ ಸರ್ಕಾರದ ವಿರುದ್ಧ
ಧಿಕ್ಕಾರದ ಕೂಗು ಕೂಗುತ್ತಿರುವ ಧ್ವನಿ ಕೇಳಿಬರುತ್ತಿತ್ತು.
ಇದಕ್ಕೆ ಕಾರಣ ರೈತರಿಗೆ ಸಭೆಯಲ್ಲಿ ಪ್ರವೇಶ ನೀಡದಿರುವುದು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಗೆ ಪ್ರವೇಶ ನೀಡದಿದ್ದಕ್ಕೆ ಪೊಲೀಸರ ವಿರುದ್ಧ ರೈತರು ಹರಿಹಾಯ್ದಿದ್ದಾರೆ. ಅಲ್ಲದೆ ಸರ್ಕಾರ ವಿರುದ್ಧ ಧಿಕ್ಕಾರವನ್ನು ಕೂಗಿದ್ದಾರೆ.
ಯೋಜನೆ ಕುರಿತಂತೆ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರದಿಂದ ಹಲವಾರು ರೈತರು ಹಾಗೂ ಜನಪ್ರತಿನಿಧಿಗಳು ಬಂದಿದ್ದರು. ಆದರೆ, ಸಭೆಗೆ ರೈತ ಮುಖಂಡರಿಗೆ ಮಾತ್ರ ಪ್ರವೇಶ ನೀಡಿದ ಪೊಲೀಸರು ಉಳಿದ ರೈತರು ಒಳಪ್ರವೇಶಿಸುವುದನ್ನು ನಿರಾಕರಿಸಿದ್ದರು. ಅಲ್ಲದೆ, ಗೃಹ ಕಚೇರಿ ಎದುರು ನಿಲ್ಲಲು ಬಿಡದೆ ಕುಮಾರ ಕೃಪಾ ಕಡೆಗೆ ರೈತರನ್ನು ಕಳುಹಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ನಿವಾಸದೆದರು ರೈತರು ಗುಂಪು ಗುಂಪಾಗಿ ನಿಂತ ಹಿನ್ನೆಲೆಯಲ್ಲಿ ಎಲ್ಲಿ ಪ್ರತಿಭಟನೆ ನಡೆಸುತ್ತಾರೋ ಎಂಬ ಕಾರಣಕ್ಕೆ ಪೊಲೀಸರು ಗುಂಪು ಚದುರಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಕ್ರೋಶಗೊಡ ರೈತರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಸೀರ್ ಅಹ್ಮದ್ ಅವರು ನಾನು ಯಾರು ಗೊತ್ತಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ನಡೆದ ಕೆಲವು ನಿಮಿಷಗಳ ಬಳಿಕ ಪೊಲೀಸರು ರೈತರನ್ನು ಒಳ ಹೋಗಲು ಬಿಟ್ಟಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ