ಬರೋಬ್ಬರಿ ಏಳೂ ಕಾಲು ಕೆಜಿ ತೂಕದ ಮಗು ಹೆತ್ತ ಹಾಸನ ಮಹಿಳೆ

ಹಾಸನದ ಮಹಾತಾಯಿಯೊಬ್ಬಳು ಬರೋಬ್ಬರಿ ಏಳು ಕಾಲು ಕೆಜಿ ತೂಕದ ಮಗುವಿಗೆ ಜನ್ಮ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ! ಜೊತೆಗೆ ದಾಖಲೆ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಹಾಸನದ ಮಹಾತಾಯಿಯೊಬ್ಬಳು ಬರೋಬ್ಬರಿ ಏಳು ಕಾಲು ಕೆಜಿ ತೂಕದ ಮಗುವಿಗೆ ಜನ್ಮ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ! ಜೊತೆಗೆ ದಾಖಲೆ ಸೃಷ್ಟಿಸಿದ್ದಾಳೆ.

ಇದೇ ಮೊದಲಿಗೆ ದೇಶದಲ್ಲಿ ಜನಿಸಿದ ಅತಿ ಹೆಚ್ಚು ಭಾರದ ಮಗು ಇದಾಗಿದೆಯಂತೆ. ಬೇಲೂರು ತಾಲೂಕು ದೊಡ್ಡಿಹಳ್ಳಿ ಗ್ರಾಮದ ಅರುಣ್ ಅವರ ಪತ್ನಿ ನಂದಿನಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ. ಸೋಮವಾರ ಬೆಳಗ್ಗೆ ತನ್ನ ದ್ವಿಚಕ್ರ ವಾಹನದಲ್ಲೇ ಹೆರಿಗೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು.

ದೊಡ್ಡಿಹಳ್ಳಿಯ ಅರುಣ್ ಅವರೊಂದಿಗೆ ಎರಡು ವರ್ಷಗಳ ಹಿಂದೆ ನಂದಿನಿ ವಿವಾಹವಾಗಿತ್ತು. ಅವರು ಸೋಮವಾರ ಹೆರಿಗೆಗೆಂದು ಹಿಂಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸಹಜ ಹೆರಿಗೆಗೆ ತೂಕ ಅಡ್ಡಿಯಾದ್ದರಿಂದ ವೈದ್ಯರು ಸಿಸೆರಿಯನ್ ಮೂಲಕ ಮಗುವನ್ನು ಹೊರತೆಗೆದರು. ತಕ್ಷಣ ಪರೀಕ್ಷಿಸಿದಾಗ ಮಗುವಿನ ತೂಕ 7.25 ಕೆ.ಜಿ. ಇತ್ತು. ನಂತರ ನೋಡಿದಾಗ 6.82 ಕೆ.ಜಿ. ತೂಕವಿರುವುದು ಖಚಿತವಾಯಿತು.

ಸಾಮಾನ್ಯ ಮಕ್ಕಳಿಗಿಂತ 2 ಪಟ್ಟು ಹೆಚ್ಚು ತೂಕವಿರುವ ಮಗು ಆರೋಗ್ಯವಾಗಿದೆ. ಗಾತ್ರ ಹೆಚ್ಚಳಕ್ಕೆ ಆರೋಗ್ಯ ಸಮಸ್ಯೆ ಕಾರಣವೇ ಎನ್ನುವುದಕ್ಕೆ ಎಂಆರ್​ಐ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿ ಹಲವು ತಪಾಸಣೆಗಳು ನಡೆಯಬೇಕಿದೆ ಎನ್ನುತ್ತಾರೆ ವೈದ್ಯರು.

ಇವು ಹಿಂಸ್  ಆಸ್ಪತ್ರೆಯಲ್ಲಿ ಲಭ್ಯವಿಲ್ಲದ್ದರಿಂದ ಆಸ್ಪತ್ರೆಯ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ನಡೆಸಬೇಕಿದೆ. 1955ರಲ್ಲಿ ಇಟಲಿಯಲ್ಲಿ ಜನಿಸಿರುವ 10.2 ಕೆ.ಜಿ. ತೂಕದ ಮಗು ಗಿನ್ನಿಸ್ ದಾಖಲೆ ಸೇರಿದೆ. ನಮ್ಮ ದೇಶದಲ್ಲಿ ಈ ಮಗು ಅತಿ ಹೆಚ್ಚು ತೂಕದ ಮಗು ಎನ್ನುವ ದಾಖಲೆಗೆ ಪಾತ್ರವಾಗಲಿದೆ ಎಂದು ಆಸ್ಪತ್ರೆ ಮಕ್ಕಳ ತಜ್ಞ ಡಾ.ಕುಮಾರ್ ತಿಳಿಸಿದ್ದಾರೆ.

ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ನನ್ನ ಮಗಳು ಹುಟ್ಟುತ್ತಲೇ ಖ್ಯಾತಿ ಪಡೆದಿರುವುದು ಸಂತೋಷವುಂಟು ಮಾಡಿದೆ ಎಂದು ಮಗುವಿನ ತಂದೆ ಅರುಣ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com