
ನವದೆಹಲಿ: 2012ರ ಕೇರಳದ ಮೀನುಗಾರರಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರಿಬ್ಬರ ಪೈಕಿ ಓರ್ವ ನಾವಿಕನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ‘ಮಾನವೀಯ ನೆಲೆಯಲ್ಲಿ ಜಾಮೀನು ಷರತ್ತನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಆತನಿಗೆ ತನ್ನ ತವರಿಗೆ ಹೊರಡಲು ಗುರುವಾರ ಅನುಮತಿ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಂತಾರಾಷ್ಟ್ರಿಯ ಆರ್ಬಿಟ್ರಲ್ ಟ್ರಿಬ್ಯೂನಲ್ ವ್ಯಾಪ್ತಿ ವಿಚಾರವನ್ನು ನಿರ್ಧರಿಸುವವರೆಗೆ ನಾವಿಕ ಸಾಲ್ವಟೋರ್ ಗಿರೋನ್ ತಾಯ್ನಾಡಿಗೆ ವಾಪಸಾಗಲು ಗುರುವಾರ ಅನುಮತಿ ನೀಡಿತು. ಜಾಮೀನು ಷರತ್ತನ್ನು ಸಡಿಲಗೊಳಿಸಲು ತನ್ನ ಆಕ್ಷೇಪವಿಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ತಿಳಿಸಿದ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿದ್ದು, ‘ಟ್ರಿಬ್ಯೂನಲ್ ಭಾರತದ ಪರವಾಗಿ ತೀರ್ಪು ನೀಡಿದರೆ ಗಿರೋನ್ ಭಾರತಕ್ಕೆ ವಾಪಸಾಗುವುದಾಗಿ ಇಟಲಿ ರಾಯಭಾರಿ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆದೇಶ ನೀಡಿತು.
ಗಿರೋನ್ ಗೆ ಸುಪ್ರೀಂ ಷರತ್ತು
ಇದೇ ವೇಳೆ ನಾವಿಕ ಗಿರೋನ್ ಗೆ ಸುಪ್ರೀಂ ಕೋರ್ಟ್ ತಯ್ನಾನಾಡಿಗೆ ತೆರಳಲು ಅನುಮತಿ ನೀಡಿದೆಯಾದರೂ, ಆತನಿಗೆ ಹಲವು ಷರತ್ತುಗಳನ್ನುವ ವಿಧಿಸಿದೆ. ಭಾರತದಿಂದ ವಾಪಸಾದ ಬಳಿಕ ಗಿರೋನ್ ತಾವು ಇರುವ ಪ್ರದೇಶದಲ್ಲಿನ ಪೊಲೀಸ್ ಠಾಣೆಗೆ ಪ್ರತಿ ತಿಂಗಳೂ ಹಾಜರಾಗಬೇಕು ಮತ್ತು ಭಾರತದಿಂದ ಹೋದ ಬಳಿಕವೂ ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಪಾಲಿಸಲು ಒಪ್ಪಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಷರತ್ತು ವಿಧಿಸಿದೆ.
2012ರಲ್ಲಿ ಇಟಲಿಯ ತೈಲ ಟ್ಯಾಂಕರ್ ಕಾವಲು ನಿರತರಾಗಿದ್ದ ನಾವಿಕರಾದ ಸಾಲ್ವಟೋರ್ ಗಿರೋನ್ ಮತ್ತು ಮಸ್ಸಿಮಿಲಿಯಾನೊ ಲಾಟೊರ್ರೆ ತಮ್ಮ ನೌಕೆಯ ಸಮೀಪ ಬಂದ ಕೇರಳದ ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ತಿಳಿದು ಗುಂಡಿಕ್ಕಿ ಹತ್ಯೆಗೈದಿದ್ದರು. ಬಳಿಕ ಇಬ್ಬರೂ ನಾವಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತೀವ್ರ ಹಗ್ಗ-ಜಗ್ಗಾಟದಿಂದ ಕೂಡಿದ್ದ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಇಟಲಿ ಆಗ್ರಹಿಸಿತ್ತು. ಆದರೆ ಪ್ರಕರಣ ತನ್ನ ದೇಶದಲ್ಲಿ ನಡೆದಿದ್ದು, ಅದೂ ಕೂಡ ತನ್ನ ನಾಗರೀಕರ ಹತ್ಯೆಯಾಗಿರುವುರಿಂದ ಭಾರತದಲ್ಲೇ ವಿಚಾರಣೆ ನಡೆಸಬೇಕು ಎಂದು ಭಾರತ ವಾದಿಸಿತ್ತು. ಹೀಗಾಗಿ ಪ್ರಕರಣದಲ್ಲಿ ಸುಪ್ರೀಂ ಮಧ್ಯ ಪ್ರವೇಶ ಮಾಡಿತ್ತು. ಈ ಹಿಂದೆ ಪ್ರಕರಣದ ಇನ್ನೊಬ್ಬ ನಾವಿಕ ಮಸ್ಸಿಮಿಲಿಯಾನೊ ಲಾಟೊರ್ರೆ 2014ರಲ್ಲೇ ಇಟಲಿಗೆ ವಾಪಸಾಗಿದ್ದರು.
Advertisement