ಸಚಿನ್, ಲತಾ ಲೇವಡಿ: ತನ್ಮಯ್ ವಿಡಿಯೋಗೆ ತಡೆ ಕೋರಿ ಯ್ಯೂಟೂಬ್, ಗೂಗಲ್ ಸಂಪರ್ಕಿಸಿದ ಪೊಲೀಸರು

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಲೇವಡಿ ಮಾಡಿದ ಆರೋಪ ಎದುರಿಸುತ್ತಿರುವ ನಟ...
ತನ್ಮಯ್ ಭಟ್
ತನ್ಮಯ್ ಭಟ್
Updated on
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಲೇವಡಿ ಮಾಡಿದ ಆರೋಪ ಎದುರಿಸುತ್ತಿರುವ ನಟ ತನ್ಮಯ್ ಭಟ್ ಅವರ ವಿಡಿಯೋವನ್ನು ಪ್ರಸಾರಮಾಡದಂತೆ ಮುಂಬೈ ಪೊಲೀಸರು ಯ್ಯೂಟೂಬ್ ಹಾಗೂ ಗೂಗಲ್ ಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಈಗಾಗಲೇ ತನ್ಮಯ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಮುಂಬೈ ವಿಶೇಷ ಬ್ರಾಂಚ್ ನ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಸಚಿನ್ V/s ಲತಾ ಅಂತರ್ಯುದ್ಧ ಎಂಬ ಶಿರ್ಷಿಕೆ ಅಡಿಯಲ್ಲಿ ಕೀಳು ಮಟ್ಟದ ಹಾಸ್ಯ ನಿರ್ಮಿಸಿದ ಎಐಬಿ ಹಾಸ್ಯ ಸಂಸ್ಥೆ ಮುಖ್ಯಸ್ಥ ತನ್ಮಯ್ ಭಟ್ ವಿರುದ್ಧ ಬಿಜೆಪಿ ಹಾಗೂ ಎಂಎನ್ಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಬಾಲಿವುಡ್ ನ ಕೆಲವು ಹಿರಿಯಲು ಇದನ್ನು ಕಟುವಾಗಿ ಟೀಕಿಸಿದ್ದಾರೆ. ಆದರೆ ಸಚಿನ್ ಅಥವಾ ಲತಾ ಮಂಗೇಶ್ಕರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎಐಬಿ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಮುಂಬೈ ವಿಶೇಷ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಹಾಗೂ ಮುಂಬೈ ಪೊಲೀಸ್ ಪಿಆರ್ ಒ ಸಂಗ್ರಾಮ್ ಸಿಂಗ್ ನಿಶಾಂದರ್ ಅವರು ತಿಳಿಸಿದ್ದಾರೆ.
ತನ್ಮಯ್ ಭಟ್ ಅವರ ಈ ಹಾಸ್ಯ ಕಿರುಚಿತ್ರದ ಕುರಿತು ಬಾಲಿವುಡ್ ನಟರಾದ ಅನುಪಮ್ ಖೇರ್ ಹಾಗೂ ರಿತೇಶ್ ದೇಶ್ಮುಖ್ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ನನಗೆ 9 ಬಾರಿ ಉತ್ತಮ ಹಾಸ್ಯ ನಟ ಎಂಬ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ ನನಗೆ ಉತ್ತಮ ಹಾಸ್ಯ ಪ್ರಜ್ಞೆ ಕೂಡ ಇದೆ. ಆದರೆ ಇಂತಹ ಕೀಳು ಮಟ್ಟದ ಹಾಸ್ಯವನ್ನು ನಿರೀಕ್ಷಿಸಿರಲಿಲ್ಲ ಎಂದು ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ.
ಮಹಾನ್ ಸಾಧಕರ ವಿಚಾರವಾಗಿ ನಿರ್ಮಿಸಿರುವ ಹಾಸ್ಯದಿಂದ ನನಗೆ ಆಘಾತವಾಗಿದೆ. ಇದು ಹಾಸ್ಯವಲ್ಲ ಅಗೌರವ ಎಂದು ರಿತೇಶ್ ದೇಶ್ಮುಖ್  ಹೇಳಿದ್ದಾರೆ.
ಸಚಿನ್ ಹಾಗೂ ಲತಾ ಅಂತರ್ಯುದ್ಧ ಎಂಬ ಶಿರ್ಷಿಕೆ ಅಡಿಯಲ್ಲಿ ಕೀಳು ಮಟ್ಟದ ಹಾಸ್ಯ ನಿರ್ಮಿಸಿದ ತನ್ಮಯ್, ಮುಂದುವರೆದು ಸಚಿನ್ ಹಾಗೂ ವಿರಾಟ್ ಇವರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಹಾಕಿದ್ದರು. ಈ ವಿಡೀಯೋ ತುಣುಕನ್ನು ಮೇ 26ರಂದು ಯ್ಯೂಟೂಬ್ ಗೆ ಅಪ್​ಲೋಡ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com