ಮಸೂದ್ ಅಜರ್ ಗೆ ಉಗ್ರ ಪಟ್ಟ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ತರಾಟೆ

ಜೈಶ್ ಇ ಮಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಜೂದ್ ಅಜರ್ ನನ್ನು ವಿಶ್ವಸಂಸ್ಥೆಯ ಉಗ್ರಗಾಮಿಗಳ ಪಟ್ಟಿ ಸೇರಿಸುವ ಕುರಿತು ವಿಶ್ವಸಂಸ್ಥೆ ಅನುಸರಿಸುತ್ತಿರುವ ನಡೆ ವಿರುದ್ಧ ಭಾರತ ಕಿಡಿಕಾರಿದ್ದು, ಇದು ರಾಜಕೀಯ ದುರುದ್ದೇಶಪೂರಿತ ಹಾಗೂ ಕಾಲಹರಣ ಕ್ರಮ ಎಂದು ಟೀಕಿಸಿದೆ.
ಭಾರತದ ವಿಶ್ವಸಂಸ್ಥೆಯ ರಾಯಭಾರಿ ಅಕ್ಬರುದ್ದೀನ್ ಹಾಗೂ ಉಗ್ರ ಮಸೂದ್ ಅಜರ್ (ಸಂಗ್ರಹ ಚಿತ್ರ)
ಭಾರತದ ವಿಶ್ವಸಂಸ್ಥೆಯ ರಾಯಭಾರಿ ಅಕ್ಬರುದ್ದೀನ್ ಹಾಗೂ ಉಗ್ರ ಮಸೂದ್ ಅಜರ್ (ಸಂಗ್ರಹ ಚಿತ್ರ)

ವಿಶ್ವಸಂಸ್ಥೆ: ಜೈಶ್ ಇ ಮಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಜೂದ್ ಅಜರ್ ನನ್ನು ವಿಶ್ವಸಂಸ್ಥೆಯ ಉಗ್ರಗಾಮಿಗಳ ಪಟ್ಟಿ ಸೇರಿಸುವ ಕುರಿತು ವಿಶ್ವಸಂಸ್ಥೆ ಅನುಸರಿಸುತ್ತಿರುವ ನಡೆ ವಿರುದ್ಧ ಭಾರತ ಕಿಡಿಕಾರಿದ್ದು, ಇದು  ರಾಜಕೀಯ ದುರುದ್ದೇಶಪೂರಿತ ಹಾಗೂ ಕಾಲಹರಣ ಕ್ರಮ ಎಂದು ಟೀಕಿಸಿದೆ.

ವಿಶ್ವಸಂಸ್ಥೆಯ ಭಾರತದ ರಾಯಭಾರಿ ಅಕ್ಬರುದ್ದೀನ್ ಅವರು ಈ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. "ಭಯೋತ್ಪಾದನೆ ಎಂಬ ವಿಷ ವರ್ತುಲ ಇಡೀ ಪ್ರಪಂಚವನ್ನು ಆವರಿಸುತ್ತಿದ್ದರೂ,  ಓರ್ವ ಉಗ್ರಗಾಮಿಯನ್ನು ಉಗ್ರನೆಂದು ಘೋಷಣೆ ಮಾಡಲು ವಿಶ್ವಸಂಸ್ಥೆ ಮೀನಾಮೇಷ ಎಣಿಸುತ್ತಿದೆ. ಕಳೆದ 9 ತಿಂಗಳುಗಳಿಂದಲೂ ಭಾರತ ಈ ಬಗ್ಗೆ ಸತತ ಪ್ರಯತ್ನ ಪಡುತ್ತಿದೆಯಾದರೂ ವಿಶ್ವಸಂಸ್ಥೆ ಮಾತ್ರ ತಾಂತ್ರಿಕ  ಕಾರಣಗಳನ್ನು ನೀಡಿ ತನ್ನ ನಿರ್ಧಾರವನ್ನು ಮುಂದೂಡುತ್ತಿದೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು ಚೀನಾ ದೇಶ ಪಾಕಿಸ್ತಾನ ಮೂಲದ ಅಜರ್ ಮಸೂದ್ ನನ್ನು ಉಗ್ರಗಾಮಿ ಎಂದು ಘೋಷಿಸಿಲು ತಾಂತ್ರಿಕ ಅಡ್ಡಿಯ ನೆಪವೊಡ್ಡಿತ್ತು. ಇದಕ್ಕೆ 6 ತಿಂಗಳ ಕಾಲಾವಧಿ ಕೂಡ ಕೇಳಿತ್ತು. 6 ತಿಂಗಳ ಕಾಲಾವಧಿಯ ಒಳಗೆ  ಈ ತಾಂತ್ರಿಕ ಅಡ್ಡಿಯ ನಿವಾರಣೆ ಮಾಡಬೇಕು ಎಂಬ ನಿಯಮವಿದ್ದು, ಕಳೆದ ಸೆಪ್ಚೆಂಬರ್ ನಲ್ಲೇ ಅವಧಿ ಪೂರ್ಣಗೊಂಡಿದೆ. ಹೀಗಿದ್ದರೂ ಈ ಬಗ್ಗೆ ಈವರೆಗೂ ವಿಶ್ವಸಂಸ್ಥೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಇದೀಗ ಮತ್ತೆ ಚೀನಾ  ಮೂರು ತಿಂಗಳ ಹೆಚ್ಚವರಿ ಕಾಲಾವಧಿ ಕೇಳುತ್ತಿದೆ ಎಂದು ಭಾರತ ಕಿಡಿಕಾರಿದೆ.

ವಿನಾಕಾರಣ ಈ ಬಗ್ಗೆ ಅಂತ್ಯವಿಲ್ಲದ ಚರ್ಚೆಗಳು ನಡೆಯುತ್ತಿದ್ದು ಶೀಘ್ರ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಪುನರಚಿಸುವ ಅವಶ್ಯಕತೆ ಇದ್ದು, ವಿಶ್ವಸಂಸ್ಥೆ ಈ ಬಗ್ಗೆ ಗಂಭೀರ  ಚಿಂತನೆ ಮಾಡಬೇಕು. ಸಿರಿಯಾ, ದಕ್ಷಿಣ ಸುಡಾನ್ ಸೇರಿದಂತೆ ವಿಶ್ವದ ನಾನಾ ಮೂಲೆಗಳಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದೆ. ಮಾನವೀಯ ಚಟುವಟಿಕೆಗಳ ಮೇಲೆ ಭಯೋತ್ಪಾದನೆ ಗಂಭೀರ ಪರಿಣಾಮ ಬೀರುತ್ತಿದ್ದು,  ಉಗ್ರಗಾಮಿಗಳ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಅವರಿಗೆ ಕಠಿಣ ಸಂದೇಶ ರವಾನಿಸಬೇಕು ಎಂದು ಅಕ್ಬರುದ್ದೀನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com