ರಾಜ್ಯಸಭೆ: ತರಕಾರಿ ಕೊಳ್ಳಲೂ ಕೂಡ ಜನರ ಬಳಿ ಹಣವಿಲ್ಲ: ಸಮಾಜವಾದಿ ಪಕ್ಷ

ಕೇಂದ್ರ ಸರ್ಕಾರದ ನೋಟು ನಿಷೇಧ ವಿಚಾರ ರಾಜ್ಯಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಮುಖ ವಿಪಕ್ಷ ಕಾಂಗ್ರೆಸ್ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ರಾಜ್ಯಸಭೆ (ಸಂಗ್ರಹ ಚಿತ್ರ)
ರಾಜ್ಯಸಭೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ವಿಚಾರ ರಾಜ್ಯಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಮುಖ ವಿಪಕ್ಷ ಕಾಂಗ್ರೆಸ್ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದ ನಿಮಿತ್ತ ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ಅವರು ನೋಟು ನಿಷೇಧ ಮಾಡಿದ ಕೇಂದ್ರ  ಸರ್ಕಾರದ ತೀವ್ರ ಕಿಡಿಕಾರಿದರು. ಕೇಂದ್ರ ಸರ್ಕಾರ ಯಾವುದೇ ರೀತಿಯ ಮುಂಜಾಗ್ರತೆ ಇಲ್ಲದೇ ನೋಟು ನಿಷೇಧ ಮಾಡಿದೆ. ಇದರಿಂದೇ ದೇಶದ ಆರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಲಕ್ಷಾಂತರ ಕೋಟಿ  ವಹಿವಾಟಿನ ಮಧ್ಯಮ ಪ್ರಮಾಣದ ವಹಿವಾಟುದಾರರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಇಂದಿನ ದಿಢೀರ್ ನಿರ್ಧಾರದಿಂದಾಗಿ ಇಂದು ದೇಶದ ಜನತೆ ಯಾವ ಪರಿಸ್ಥಿತಿಯಲ್ಲಿದೆ ಎಂದರೆ ಅವರ ಬಳಿ ತರಕಾರಿ ಕೊಳ್ಳಲೂ ಕೂಡ ಹಣವಿಲ್ಲದಂತೆ ಸರ್ಕಾರ ಮಾಡಿದೆ. ಖಾತೆಯಲ್ಲಿರುವ ತಮ್ಮದೇ ಹಣ  ಬಳಕೆಗೂ ಬ್ಯಾಂಕುಗಳ ಮುಂದೆ ದಿನವಿಡೀ ಸರತಿ ಸಾಲಲ್ಲಿ ನಿಂತು ಹಣ ಪಡೆಯಬೇಕಿದೆ ಎಂದು ರಾಮ್ ಗೋಪಾಲ್ ಯಾದವ್ ಕಿಡಿಕಾರಿದರು.

2 ಸಾವಿರ ರು. ನೋಟು ಚಲಾವಣೆಗೆ ತರುವಂತೆ ಸಲಹೆ ನೀಡಿದ್ದು ಯಾರು?
1000 ರು.ನೋಟು ನಿಷೇಧಿಸಿ 2000 ರು.ನೋಟು ಚಲಾವಣೆಗೆ ತರುವ ಸಲಹೆ ನೀಡಿದ್ದು ಯಾರು? ಎಂದು ರಾಮ್ ಗೋಪಾಲ್ ಯಾದವ್ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, 1000 ರು.ಗೇ ಚಿಲ್ಲರೆ ಇಲ್ಲದೆ  ಒದ್ದಾಡುತ್ತಿದ್ದ ಪರಿಸ್ಥಿತಿಯಲ್ಲಿ 2000 ರು.ನೋಟುಗಳನ್ನು ಚಲಾವಣೆಗೆ ತಂದಿದ್ದೀರಿ. ಎಟಿಎಂಗಳಲ್ಲಿ ಚಿಲ್ಲರೆ ಹಣವಿಲ್ಲ. ಹೀಗಿರುವಾಗ ಚಿಲ್ಲರೆಗೆ ಏನು ಮಾಡುವುದು? ಅತ್ತ ಚಿಲ್ಲರೆ ಇಲ್ಲದೆ ಮಾರುಕಟ್ಟೆಗಳು ಬಣಗುಡುತ್ತಿದ್ದು,  ವ್ಯಾಪಾರವಿಲ್ಲದೇ ರೈತ ಕಂಗಾಲಾಗಿದ್ದಾನೆ. ಕೆಲವು ಸಾವಿರ ಟನ್ ತರಕಾರಿ ವ್ಯಾಪಾರವಿಲ್ಲದೇ ಕೊಳೆಯುತ್ತಿವೆ ಎಂದು ಹೇಳಿದ್ದಾರೆ.

ಹಳ್ಳಿಗಳಿಗೆ ಹೋದರೆ ಕೇಂದ್ರ ಸರ್ಕಾರಕ್ಕೆ ಲಟ್ಟಣಿಗೆ ಏಟು
ಸರ್ಕಾರದ ನಿರ್ಧಾರದಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಅಗತ್ಯ ಸಾಮಗ್ರಿಗಳ ಖರೀದಿಗೆ ಹಣವಿಲ್ಲದೇ ರೈತರು ಒದ್ದಾಡುತ್ತಿದ್ದಾರೆ. ಹಣ ವಿನಿಮಯ ಮತ್ತು ಠೇವಣಿಗೆ ಕಿ.ಮೀ ಗಟ್ಟಲೇ ದೂರದಲ್ಲಿರುವ ಬ್ಯಾಂಕುಗಳಿಗೆ  ಬರುವ ಅನಿವಾರ್ಯತೆ. ಬಂದರೂ ಸರತಿ ಸಾಲಲ್ಲಿ ನಿಲ್ಲಬೇಕು. ಸಾಲಲ್ಲಿ ನಿಂತರೂ ಹಣ ದೊರೆಯುತ್ತದೆ ಎನ್ನುವ ವಿಶ್ವಾಸವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದ ಹಳ್ಳಿಗಳಿಗೆ ಹೋದರೆ ಗ್ರಾಮೀಣ ಮಹಿಳೆಯರು ತಾವು  ರೊಟ್ಟಿ ಮಾಡಲು ಬಳಸುವ ಲಟ್ಟಣಿಗೆಯಲ್ಲಿ ಹೊಡೆಯುತ್ತಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.

ಒಟ್ಟಾರೆ ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಎನ್ ಡಿಎ ಸರ್ಕಾರವನ್ನು ಸಮಾಜವಾದಿ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com