ಬೆಂಗಳೂರು: ಕಳೆದ ಸೆಪ್ಟೆಂಬರ್ 23ರಂದು ವಿಶೇಷ ಅಧಿವೇಶ ಕರೆದು ಕಾವೇರಿ ನೀರು ಕುಡಿಯಲು ಮಾತ್ರ ಎಂದು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದ ರಾಜ್ಯ ಸರ್ಕಾರ ಇದೀಗ ಸೋಮವಾರ ಮತ್ತೊಂದು ವಿಶೇಷ ಅಧಿವೇಶನ ಕರೆದು ಕಾವೇರಿ ಕೊಳ್ಳದ ಜಲಾಶಯಗಳ ನೀರು ಕುಡಿಯಲು ಹಾಗೂ ಹೆಚ್ಚುವರಿ ನೀರನ್ನು ರಾಜ್ಯದ ರೈತರ ಬೆಳೆಗೂ ಹರಿಸಲು ಸರ್ವಾನುಮತದ ನಿರ್ಣಯ ಕೈಗೊಂಡಿದೆ.
ರಾಜ್ಯದ ರೈತರ ಬೆಳೆಗಳಿಗೆ ನೀರು ಹರಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ಇಂದು ವಿಧಾನಸಭೆಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ನಿರ್ಣಯ ಮಂಡಿಸಿದರು. ಬಳಿಕ ನಿರ್ಣಯದ ಮೇಲೆ ಸುದಿರ್ಘ ಚರ್ಚೆ ನಡೆಯಿತು.
ಚರ್ಚೆಯ ನಂತರ ಕಾವೇರಿ ನೀರು ಕುಡಿಯಲು ಮತ್ತು ರಾಜ್ಯದ ರೈತರ ಬೆಳೆಗೆ ಬಿಡಲು ವಿಧಾನಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ ಎಂದು ಹೇಳಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಇದಕ್ಕೂ ಮುನ್ನ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾಯಾಲಯದ ಮೇಲೆ ನಮಗೆ ಅಪಾರವಾದ ಗೌರವವಿದೆ. ಆದರೆ ಕುಡಿಯುವ ನೀರಿನ ಹಕ್ಕು ಮೂಲಭೂತ ಹಕ್ಕಾಗಿದೆ. ಹೀಗಾಗಿ ಮೊದಲ ಆದ್ಯತೆ ಕುಡಿಯುವ ನೀರಿಗೆ ಎಂದರು.
ಕಾವೇರಿ ವಿಚಾರದ ಕುರಿತು ಸುಪ್ರೀಂಕೋರ್ಟ್ ನಿಂದ 6 ಬಾರಿ ಆದೇಶ ಬಂದಿದೆ. ಆದರೆ ನಮಗೆ ಕೋರ್ಟ್ ವಿಷಯದಲ್ಲಿ ಸಂಘರ್ಷ ಮಾಡಬೇಕೆಂಬ ಇಚ್ಚೆ ಇಲ್ಲ. ಈಗ ಇರುವ(34 ಟಿಎಂಸಿ) ನೀರು ಜೂನ್ ತನಕ ಕುಡಿಯಲು ಸಾಲುತ್ತೆ. ಸುಪ್ರೀಂಕೋರ್ಟ್ ನ ಹಿಂದಿನ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ಹೇಳುವ ಮೂಲಕ ತಮಿಳುನಾಡಿಗೆ ನೀರು ಬಿಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಈ ವರ್ಷ ನಾವು ತಮಿಳುನಾಡಿಗೆ 53.2 ಟಿಎಂಸಿ ನೀರು ಬಿಟ್ಟಿದ್ದೇವೆ. ಕಾವೇರಿ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಡಬೇಕು. 2014 -15ನೇ ಸಾಲಿನಲ್ಲಿ 229 ಟಿಎಂಸಿ ನೀರು ಬಿಟ್ಟಿದ್ದೇವೆ. ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಹೇಳಿದರು.
ಇನ್ನು ವಿಧಾನಪರಿಷತ್ತಿನಲ್ಲೂ ಸೆ.23ರಂದು ಕೈಗೊಂಡಿದ್ದ ನಿರ್ಣಯ ಬದಲಾಯಿಸಿದ್ದು, ಪ್ರತಿಪಕ್ಷಗಳ ವಿರೋಧದ ನಡುವೆಯೂ ಕುಡಿಯುವುದರ ಜೊತೆಗೆ ರೈತರ ಬೆಳೆಗಳಿಗೂ ನೀರು ಬಿಡುಗಡೆ ಮಾಡುವ ನಿರ್ಣಯವನ್ನು ಅಂಗೀಕರಿಸಲಾಗಿದೆ.