
ಶ್ರೀನಗರ: ಭಾರತದ ಉರಿ ಸೆಕ್ಟರ್ ಮೇಲೆ ದಾಳಿ ನಡೆಸಿ 20 ಯೋಧರನ್ನು ಕೊಂದಿದ್ದು ನಾವೇ ಎಂದು ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಹೇಳಿಕೊಂಡಿದೆ.
ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದ್ದು, ವರದಿಯಲ್ಲಿ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ಪೋಸ್ಟರ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಲಷ್ಕರ್ ಸಂಘಟನೆಯ ಪೋಸ್ಟರ್ ವೊಂದರಲ್ಲಿ ಈ ಬಗ್ಗೆ ಮಾಹಿತಿ ದೊರೆತಿದ್ದು, ಪಾಕಿಸ್ತಾನದ ಪಂಜಾಬ್ ನಲ್ಲಿರುವ ಗುಜ್ರನ್‌ವಾಲಾ ಪಟ್ಟಣದ ಬೀದಿಯಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಕಾರ್ಯಕರ್ತರು ಈ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಪೋಸ್ಟರ್ ನಲ್ಲಿ ಉರಿ ಉಗ್ರ ದಾಳಿ ನಡೆಸಿದ್ದು ನಾವೇ. ಅಂದು ದಾಳಿಯಲ್ಲಿ ಸಾವನ್ನಪ್ಪಿದ ನಾಲ್ಕು ಉಗ್ರರ ಪೈಕಿ ಓರ್ವನ ಅಂತ್ಯಕ್ರಿಯೆ ನಡೆಸಲಾಗುತ್ತಿದ್ದು, ಅಂತ್ಯಕ್ರಿಯೆ ಬಳಿಕ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಪ್ರಾರ್ಥನೆ ಬಳಿಕ ಅವರು ಬೃಹತ್ ಯುವಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಉರಿ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಮೊದಲಿನಿಂದಲೂ ಆರೋಪಿಸುತ್ತಾ ಬಂದಿತ್ತು. ಆದರೆ ಭಾರತದ ವಾದವನ್ನು ತಳ್ಳಿ ಹಾಕಿದ್ದ ಪಾಕಿಸ್ತಾನ ಕಾಶ್ಮೀರದಲ್ಲಿನ ಭಾರತೀಯ ಸೇನೆ ಹಿಂಸಾಚಾರದ ಅಲ್ಲಿನ ಜನರೇ ತಿರುಗಿಬಿದ್ದ ಘಟನೆ ಎಂದು ವಾದಿಸಿತ್ತು. ಇದೀಗ ಸ್ವತಃ ಪಾಕಿಸ್ತಾನ ಬೀದಿಯಲ್ಲಿ ಈ ಬಗ್ಗೆ ಪೋಸ್ಟರ್ ಕಾಣಿಸಿಕೊಂಡಿದ್ದು, ವಿಶ್ವ ಸಮುದಾಯದ ಎದುರು ಪಾಕಿಸ್ತಾನ ತೀವ್ರ ಮುಜುಗರಕ್ಕೊಳಗಾಗಿದೆ.
ಈ ಹಿಂದೆಯೂ ಕೂಡ ಭಾರತ ಉರಿ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಿತ್ತು. ಇದಕ್ಕೆ ಪೂರಕವೆಂಬಂತೆ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರ ಪೈಕಿ ಓರ್ವ ಉಗ್ರ ಗುಜ್ರನ್‌ವಾಲಾದ ನಿವಾಸಿ ಮೊಹಮ್ಮದ್ ಅನಾಸ್ ಅಲಿಯಾಸ್ ಅಬು ಸಿರಾಕಾ ಎಂದು ಹೇಳಿತ್ತು. ಇದು ಲಷ್ಕರ್ ಪೋಸ್ಟರ್‌ನಿಂದ ಸಾಬೀತಾಗಿದ್ದು, ನಿನ್ನೆಯಷ್ಟೇ ಉಗ್ರನ ಅಂತ್ಯಕ್ರಿಯೆ ನಡೆಸಲಾಗಿತ್ತು.
Advertisement