
ಬೆಂಗಳೂರು: ರಾಜಕೀಯ ಪಿತೂರಿಯಿಂದಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಆದರೀಗ ಅದಕ್ಕೆ ಸೋಲಾಗಿದ್ದು, ನ್ಯಾಯಾಲಯದ ತೀರ್ಪಿನಿಂದಾಗಿ ನನಗೆ ಅತೀವ ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸೌತ್ ವೆಸ್ಟ್ ಮೈನಿಂಗ್ ಕಂಪನಿಗೆ ಪರವಾನಗಿ ನೀಡುವ ಸಲುವಾಗಿ ತಮ್ಮ ಕುಟುಂಬದ ಒಡೆತನ ವಿರುವ ಪ್ರೇರಣಾ ಟ್ರಸ್ಟ್ ಗೆ ಸುಮಾರು 20 ಕೋಟಿ ರು. ಕಿಕ್ ಬ್ಯಾಕ್ ಪಡೆದ ಆರೋಪ ಯಡಿಯೂರಪ್ಪ ಅವರ ಮೇಲಿತ್ತು. ಈ ಸಂಬಂಧ ಇಂದು ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಸೇರಿದಂತೆ ಎಲ್ಲ 13 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ತೀರ್ಪಿನ ಬಳಿಕ ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಿಂದ ಹೊರಬಂದ ಬಿಎಸ್ ವೈ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಪಿತೂರಿಯಿಂದಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಆದರೆ ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇತ್ತು. ಈಗ ನನಗೆ ನ್ಯಾಯ ಸಿಕ್ಕಿದೆ. ನನ್ನ ವಿರುದ್ಧ ವಿನಾಕಾರಣ ಆರೋಪ ಹೊರಿಸಿದ್ದು ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನಿಂದ ಬಲಬಂತಾಗಿದ್ದು, ನನ್ನ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನೆಮ್ಮದಿ ಸಿಕ್ಕಿದೆ. ಐದು ವರ್ಷಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದ್ದು, ಕೋರ್ಟ್ ತೀರ್ಪಿಗೆ ನಾನು ಬೆಲೆ ಕಟ್ಟಲಾಗಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಬಲ ಸಿಕ್ಕಂತಾಗಿದ್ದು, ಬಿಜೆಪಿ ಲಕ್ಷಾಂತರ ಬೆಂಬಲಿಗರಿಗೆ ಸಮಾಧಾನ ಸಿಕ್ಕಿದೆ ಎಂದು ಹೇಳಿದರು.
ಸತ್ಯಮೇವ ಜಯತೆ: ಟ್ವಿಟರ್ ನಲ್ಲಿ ಬಿಎಸ್ ವೈ ಪ್ರತಿಕ್ರಿಯೆ
ಇನ್ನು ಇಂದಿನ ತೀರ್ಪಿನ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಎಸ್ ಯಡಿಯೂರಪ್ಪ ಅವರು, ಸತ್ಯಮೇವ ಜಯತೆ... ನ್ಯಾಯ ದೊರೆತಿದೆ. ನನ್ನನ್ನು ಬೆಂಬಲಿಸಿದ ಎಲ್ಲ ಬೆಂಬಲಿಗರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Advertisement