ಕರ್ನಾಟಕದಲ್ಲಿ ನೆಲೆಸಿದ್ದ ಸಿಮಿ ಉಗ್ರರು!

ಸೋಮವಾರ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ, ನಿಷೇಧಿತ ಸಿಮಿ ಸಂಘಟನೆಯ ಉಗ್ರರು ಈ ಹಿಂದೆ ಧಾರವಾಡದಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಎನ್ ಕೌಂಟರ್ ನಲ್ಲಿ ಸತ್ತ ಸಿಮಿ ಉಗ್ರರು
ಎನ್ ಕೌಂಟರ್ ನಲ್ಲಿ ಸತ್ತ ಸಿಮಿ ಉಗ್ರರು

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ ಹೊರವಲಯದ ಈಟ್ ಖೇಡಿ ಎಂಬ ಗ್ರಾಮದಲ್ಲಿ ಸೋಮವಾರ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ, ನಿಷೇಧಿತ ಸಿಮಿ ಸಂಘಟನೆಯ ಉಗ್ರರು  ಈ ಹಿಂದೆ ಧಾರವಾಡದಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಭೋಪಾಲ್ ಸಾವನ್ನಪ್ಪಿದ ಎಂಟು ಮಂದಿ ಉಗ್ರರ ಪೈಕಿ ಮೂವರು ಉಗ್ರರು ಧಾರವಾಡದ ಆರೋಗ್ಯನಗರದಲ್ಲಿ ವಾಸವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಉಗ್ರರಾದ ಮೆಹಬೂಬ ಗುಡ್ಡು ಮಲ್ಲಿಕ್‌, ಅಮ್ಜದ್‌ ಖಾನ್‌ ಮತ್ತು ಝಾಕಿರ್‌ ಹುಸೇನ್‌ ಸಾದಿಕ್‌ ಎಂಬ ಮೂವರು ಉಗ್ರರು ಧಾರವಾಡದ ಆರೋಗ್ಯ ನಗರದ ಶಿವಾಜಿ ಕುಲಕರ್ಣಿ ಎಂಬವವರಿಗೆ ಸೇರಿದ  ಮನೆಯ ಒಂದು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. 2014ರ ಜನವರಿಯಲ್ಲಿ ಇಲ್ಲಿಗೆ ಬಂದಿದ್ದ ಅವರು ಅದೇ ವರ್ಷದ ಜೂನ್‌ 4ರಂದು ಮನೆ ಖಾಲಿ ಮಾಡಿದ್ದರು ಎಂದು ತಿಳಿದುಬಂದಿದೆ.

ಗುಂಡಿಗೆ ಬಲಿಯಾದ ಉಗ್ರರ ಪೈಕಿ ಮೆಹಬೂಬ್‌ ಗುಡ್ಡು ಮಲ್ಲಿಕ್‌ ಮತ್ತು ಜಾಕಿರ್‌ ಹುಸೇನ್‌ ಸಾದಿಕ್‌ ಇಬ್ಬರ ಭಾವಚಿತ್ರಗಳನ್ನು ಮನೆ ಮಾಲೀಕರಾದ ಶಿವಾಜಿ ಕುಲಕರ್ಣಿ ಗುರುತಿಸಿದ್ದು, ‘ಬಟ್ಟೆ  ವ್ಯಾಪಾರ ಮಾಡುವ ಸಲುವಾಗಿ ಧಾರವಾಡಕ್ಕೆ ಬಂದಿರುವುದಾಗಿ ಹೇಳಿ 5 ತಿಂಗಳ ಕಾಲ ಮೂವರು ಬಾಡಿಗೆಗೆ ಕೊಠಡಿಯೊಂದನ್ನು ಪಡೆದಿದ್ದರು. ಸಂತೋಷ್‌, ಕಿಶನ್‌ ಮತ್ತು ಅರವಿಂದ್‌ ಎಂದು  ತಮ್ಮನ್ನು ಪರಿಚಯಿಸಿಕೊಂಡಿದ್ದರು. ಇಬ್ಬರನ್ನು ನೋಡಿದ್ದೇನೆ. ಮತ್ತೊಬ್ಬ ಉಗ್ರನ ಗುರುತು ಸಿಗುತ್ತಿಲ್ಲ’ ಎಂದು ಶಿವಾಜಿ ಕುಲಕರ್ಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಮನೆಯಲ್ಲಿ ನಾಲ್ಕು ಕೊಠಡಿಗಳು ಇದ್ದವು. ಆ ಪೈಕಿ ಒಂದು ಕೊಠಡಿಯಲ್ಲಿ ಈ ಮೂವರು ಉಗ್ರರು ನೆಲೆಸಿದ್ದರು. ಉಳಿದ ಮೂರು ಕೊಠಡಿಗಳಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ನೆಲೆಸಿದ್ದರು.  ಬೆಳಿಗ್ಗೆ ಮನೆಯಿಂದ ಹೊರಟು ರಾತ್ರಿ ವಾಪಸ್ಸಾಗುತ್ತಿದ್ದರು. ನನ್ನೊಂದಿಗೆ ಮತ್ತು  ನೆರೆಹೊರೆಯವರೊಂದಿಗೆ ಸಾಮಾನ್ಯದಂತೆಯೇ ತುಂಬಾ ಸೌಜನ್ಯದಿಂದ ವರ್ತಿಸುತ್ತಿದ್ದರು. ಪ್ರತಿ ತಿಂಗಳೂ  ತಪ್ಪದೇ ಬಾಡಿಗೆ ನೀಡುತ್ತಿದ್ದರು. ಹೀಗಾಗಿ ಅವರ ಬಗ್ಗೆ ಯಾವುದೇ ಸಂಶಯ ಬಂದಿರಲಿಲ್ಲ".

"ವಿದ್ಯಾಭ್ಯಾಸ ಮುಗಿದ ಬಳಿಕ ಉತ್ತರ ಭಾರತದ ವಿದ್ಯಾರ್ಥಿಗಳು 2014ರ ಮೇ ತಿಂಗಳಲ್ಲಿ ಬಾಡಿಗೆ  ಮನೆಗಳನ್ನು ಖಾಲಿ ಮಾಡಿದ್ದರು. ನಂತರ ಒಂದೇ ತಿಂಗಳಿಗೆ ಈ ಮೂವರು ಕೂಡ ಮನೆ ಖಾಲಿ ಮಾಡಿ ಹೋದರು. ಕೆಲ ದಿನಗಳ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳ  ತಂಡ ಮನೆಗೆ ಭೇಟಿ ನೀಡಿದಾಗಲೇ ಅವರು ಸಿಮಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಉಗ್ರರು ಎಂದು ತಿಳಿಯಿತು" ಎಂದು ಕುಲಕರ್ಣಿ ಹೇಳಿದ್ದಾರೆ.

ನಿಷೇಧಿತ ಸಿಮಿ ಉಗ್ರ ಸಂಘಟನೆಯ 8 ಉಗ್ರರು ಸೋಮವಾರ ನಸುಕಿನ 2 ರಿಂದ 3 ಗಂಟೆ ವೇಳೆಗೆ ಭದ್ರತಾ ಕಾವಲುಗಾರ ರಮಾಶಂಕರ್‌ ಯಾದವ್‌ ಅವರನ್ನು ಹತ್ಯೆ ಮಾಡಿ, ಜೈಲಿನ  ಗೋಡೆ ಹಾರಿ ಪರಾರಿಯಾಗಿದ್ದರು. ಇವರಲ್ಲಿ ಇಬ್ಬರು ಕಾರ್ಯಕರ್ತರು ಮೂರು ವರ್ಷದ ಹಿಂದೆ ಜೈಲಿನಿಂದ ಪರಾರಿಯಾಗಿ ಮತ್ತೆ ಬಂಧನಕ್ಕೊಳಗಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com