
ಕಠ್ಮಂಡು: ಭಾರತ ಪ್ರಧಾನಿ ನರೇಂದ್ರ ಮೋದಿ ಜೀ ಹಾಗೂ ನಾನು ಒಂದೇ ರೀತಿಯಲ್ಲಿ ಯೋಚಿಸುತ್ತೇವೆ ಎಂದು ನೇಪಾಳ ನೂತನ ಪ್ರಧಾನಿ ಪುಷ್ಪ್ ಕಮಲ್ ದಹಲ್ ಪ್ರಚಂಡ ಅವರು ಭಾನುವಾರ ಹೇಳಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಚಂಡ ಅವರು, ನಮ್ಮ ಸರ್ಕಾರದ ಮೊದಲ ಆದ್ಯತೆ ಏನಿದ್ದರೂ ನಮ್ಮ ಮತ್ತು ಭಾರತ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದೇ ಆಗಿದೆ. ಮುಂಬುರವ ತಮ್ಮ ಭಾರತ ಪ್ರವಾಸ ಕೂಡ ಇದೇ ಅಂಶದಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೆಪಿ ಒಲಿ ನೇತೃತ್ವದ ಸರ್ಕಾರದ ಆಡಳಿತದ ಕುರಿತು ಮಾತನಾಡಿದ ಪ್ರಚಂಡ, ಕಳೆದ ವರ್ಷ ನಿಜಕ್ಕೂ ಭಾರತ ಮತ್ತು ನೇಪಾಳ ದೇಶಗಳ ನಡುವಿನ ಸಂಬಂಧದಕ್ಕೆ ಸಂಬಂಧಿಸಿದಂತೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ನೇಪಾಳ ಜನತೆ ಹಾಗೂ ವೈಯುಕ್ತಿಕವಾಗಿ ತಾವು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ಭರವಸೆ ಇಟ್ಟಿದ್ದು, ಭವಿಷ್ಯದಲ್ಲಿ ಪರಸ್ಪರ ವಿಶ್ವಾಸದ ಮೇಲೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಆಡಳಿತ ನಡೆಸಿದ್ದ ಕೆಪಿ ಒಲಿ ಶರ್ಮಾ ನೇತೃತ್ವದ ಸರ್ಕಾರದ ಕೆಲ ನಡೆ ವಿವಾದಕ್ಕೀಡಾಗಿದ್ದವು. ನೇಪಾಳದ ಸಹೋದರ ರಾಷ್ಟ್ರದಂತಿದ್ದ ಭಾರತದ ವಿರೋಧದ ಹೊರತಾಗಿಯೂ ನೇಪಾಳ ಸರ್ಕಾರ ಚೀನಾದೊಂದಿಗೆ ಕೈ ಜೋಡಿಸಿತ್ತು. ಕೆಪಿ ಒಲಿ ಶರ್ಮಾ ಸರ್ಕಾರದ ನಡೆಗಳನ್ನು ಸ್ವತಃ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮದೇಶಿ ಮೋರ್ಚಾ ಪಕ್ಷ ಕೂಡ ಬಹಿರಂಗವಾಗಿಯೇ ಟೀಕಿಸಿತ್ತು. ಅಲ್ಲದೆ ಸರ್ಕಾರದ ಮೇಲೆ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವುದರೊಂದಿಗೆ ಕಳೆದ ಜುಲೈನಲ್ಲಿ ಕೆಪಿಒಲಿ ಶರ್ಮಾ ಸರ್ಕಾರ ಪತನವಾಗಿತ್ತು.
ಬಳಿಕ ನಡೆದ ಪ್ರಧಾನಿ ಚುನಾವಣೆಯಲ್ಲಿ ಸಿಪಿಎನ್ ಪಕ್ಷದ ಅಧ್ಯಕ್ಷ ಪುಷ್ಪ್ ಕಮಲ್ ದಹಲ್ ಪ್ರಚಂಡ ಅವರು ನೇಪಾಳದ 39ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಪ್ರಚಂಡ ಅವರಿಗೆ ಮಾಧೇಸಿ ಪೀಪಲ್ಸ್ ರೈಟ್ಸ್ ಫೋರಂ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿಗಳು ಬೆಂಬಲ ನೀಡಿದ್ದವು.
Advertisement