ಮಧ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆ; ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ಮದ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published on

ಬೆಂಗಳೂರು: ಮದ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು  ಯತ್ನಿಸಿದ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ವಿಚಾರಣೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರು ಇಂದು  ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂಚ  ರೈಲು ಬಂದ್ ಮಾಡುವ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದರು.

ಬಳಿಕ ಸಾರಾಗೋವಿಂದು ಸೇರಿದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅಲ್ಲೇ ಕರ್ತವ್ಯ  ನಿರತರಾಗಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಒಂದು ಹಂತದಲ್ಲಿ ವಾಟಾಳ್ ನಾಗರಾಜ್, ಸಾರಾಗೋವಿಂದು ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು  ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ತಮ್ಮನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು, ತಾವೇನೂ ದರೋಡೆಕೋರರಲ್ಲ. ಈ ಹಿಂದೆಯೂ ಕೂಡ ವಿಧಾನಸೌಧ ಮುತ್ತಿಗೆಗೆ  ಪ್ರಯತ್ನಿಸಿದೆವು. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಇಲ್ಲಿಗೆ ಆಗಮಿಸಿದ್ದೇವೆಯೇ ಹೊರತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಅಲ್ಲ ಎಂದು ಹೇಳಿದರು. ಬಳಿಕ ವಾಟಾಳ್ ನಾಗರಾಜ್,  ಸಾರಾಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ
ಇದೇ ವೇಳೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದ್ದು, ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರ  ಆಕ್ರೋಶ ಭುಗಿಲೆದ್ದಿದೆ. ಮಂಡ್ಯದಲ್ಲಿ ರೈತರು ಬೃಹತ್ ಜಾಥಾ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿದರೆ, ಮೈಸೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ  ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಬೆಳಗಾವಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಚೆನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ಪ್ರಕ್ಷುಬ್ಧ
ಇನ್ನು ಕಾವೇರಿ ವಿಚಾರವಾಗಿ ರಾಜಧಾನಿ ಬೆಂಗಳೂರು ಪ್ರಕ್ಷುಬ್ಧಗೊಂಡಿದ್ದು, ಮೈಸೂರು ರಸ್ತೆಯಲ್ಲಿ ಉದ್ರಿಕ್ತರ ಗುಂಪೊಂದು ತಮಿಳುನಾಡು ನೋಂದಣಿಯ ಲಾರಿಗಳಿಗೆ ಬೆಂಕಿ ಹಾಕಲಾಗಿದೆ.  ಮೈಸೂರು ರಸ್ತೆಯಲ್ಲಿರುವ ಟಿಂಬರ್ ಯಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಮೈಸೂರುರಸ್ತೆಯ ಸ್ಯಾಟೆಲೈಟ್ ಬಸ್  ನಿಲ್ದಾಣದ ಆವರಣದಲ್ಲಿರುವ ಅಡಿಯಾರ್ ಆನಂದಭವನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಹೊಟೆಲ್ ನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ವಿಚಾರ  ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಉದ್ರಿಕ್ತರನ್ನು ಚದುರಿಸಿದರು. ಪೊಲೀಸರು  ಆಗಮಿಸುತ್ತಿದ್ದಂತೆಯೇ ಸ್ಯಾಟೆಲೈಟ್ ಬಸ್ ನಿಲ್ದಾಣಕ್ಕೆ ಪ್ರತಿಭಟನಾಕಾರರು ಹಾಗೂ ಪೊಲೀಸರು ನುಗ್ಗಿದ್ದರಿಂದ ಸ್ಯಾಟೆಲೈಟ್ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ  ಸೃಷ್ಟಿಯಾಗಿತ್ತು. ಪ್ರಸ್ತುತ ಬಸ್ ನಿಲ್ದಾಣದಲ್ಲಿ ಪೊಲೀಸರ ಲಾಠಿಚಾರ್ಜ್ ವಿರೋಧಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.

ಸೆಪ್ಟೆಂಬರ್ 5ರಂದು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಕಳೆದ ಶನಿವಾರ ಮದ್ಯಂತರ ಅರ್ಜಿ ಸಲ್ಲಿಸಿತ್ತು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಾಲಯ ಸೆಪ್ಟೆಂಬರ್ 20ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಹೇಳಿತ್ತು. ಈ ಹಿಂದಿನ ತೀರ್ಪಿನಲ್ಲಿ ಕರ್ನಾಟಕ 10 ಸಾವಿರ ಕ್ಯೂಸೆಕ್ಸ್ ನಂತೆ 1.50 ಲಕ್ಷ  ಕ್ಯೂಸೆಕ್ಸ್ ನೀರು ಹಿರಿಸಿದ್ದರೆ ಸಾಕಿತ್ತು. ಆದರೆ ಇಂದಿನ ತೀರ್ಪಿನ ಬಳಿಕ ಸರ್ಕಾರ ಹೆಚ್ಚುವರಿಯಾಗಿ 30 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಅಂದರೆ ಒಟ್ಟಾರೆ ಸೆಪ್ಟೆಂಬರ್  20ರವರೆಗೆ ಒಟ್ಟು 1.80ಲಕ್ಷ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com