ಬಿರುಕಿನ ಲಾಭ ಪಡೆಯಲು ಹವಣಿಸಿದ ಚೀನಾಗೆ ಭಾರತದ ಮಾಸ್ಟರ್ ಸ್ಟ್ರೋಕ್!

ನೇಪಾಳದಲ್ಲಿ ನಡೆದ ಮದೇಸಿ ಪ್ರತಿಭಟನೆ ವೇಳೆ ಉಂಟಾಗಿದ್ದ ಭಾರತ-ನೇಪಾಳ ನಡುವಿನ ಬಿರುಕಿನ ಲಾಭ ಪಡೆಯಲು ಹವಣಿಸಿದ್ದ ಚೀನಾಗೆ ಭಾರತ ಭಾರಿ ಶಾಕ್ ನೀಡಿದ್ದು..
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ನೂತನ ಸಂವಿಧಾನ ಆಂಗೀಕಾರದ ಸಂದರ್ಭದಲ್ಲಿ ನೇಪಾಳದಲ್ಲಿ ನಡೆದ ಮದೇಸಿ ಪ್ರತಿಭಟನೆ ವೇಳೆ ಉಂಟಾಗಿದ್ದ ಭಾರತ-ನೇಪಾಳ ನಡುವಿನ ಬಿರುಕಿನ ಲಾಭ ಪಡೆಯಲು  ಹವಣಿಸಿದ್ದ ಚೀನಾಗೆ ಭಾರತ ಭಾರಿ ಶಾಕ್ ನೀಡಿದ್ದು, ನೇಪಾಳಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಆ ದೇಶದೊಂದಿಗಿನ ತನ್ನ ಬಾಂಧವ್ಯವನ್ನು ಭಾರತ ಗಟ್ಟಿಗೊಳಿಸಿದೆ.

ನೇಪಾಳದ ನೂತನ ಪ್ರಧಾನಿಯಾದಗ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಪ್ರಚಂಡ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ಒಪ್ಪಂದಗಳಿಗೆ  ಸಹಿಹಾಕಿದ್ದಾರೆ. ಈ ಒಪ್ಪಂದಗಳಲ್ಲಿ ಪ್ರಮುಖವಾಗಿ ನೇಪಾಳಕ್ಕೆ ಆರ್ಥಿಕ ನೆರವು ಸೇರಿದಂತೆ, ಉಭಯ ದೇಶಗಳು ತಮ್ಮ ವಿರುದ್ಧ ಇತರೆ ದೇಶಗಳು ನಡೆಸುವ ಪಿತೂರಿಗೆ ತಮ್ಮ ನೆಲದಲ್ಲಿ  ವೇದಿಕೆ ನಿರ್ಮಿಸಲು ಅವಕಾಶ ನೀಡಬಾರದು ಎಂಬ ಒಪ್ಪಂದ ಕೂಡ ಸೇರಿದೆ.

ನೇಪಾಳದ ಮೂಲಕ ಭಾರತವನ್ನು ನಿಯಂತ್ರಿಸ ಹೊರಟಿದ್ದ ಚೀನಾಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನೇಪಾಳದ ಹಿಂದಿನ ಪ್ರಧಾನಿ ಕೆಪಿ ಶರ್ಮಾ ಒಲಿ ಚೀನಾದೊಂದಿಗೆ ಉತ್ತಮ  ಸಂಬಂಧ ಹೊಂದಿದ್ದರು. ಮಧೇಸಿ ಹೋರಾಟ ಸಂದರ್ಭದಲ್ಲಿ ಭಾರತ- ನೇಪಾಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೇ  ಸಂದರ್ಭ ಉಪಯೋಗಿಸಿಕೊಂಡ ಚೀನಾ, ನೇಪಾಳಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಿದ್ದು, ಮಾತ್ರವಲ್ಲದೇ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿತ್ತು. ನೇಪಾಳದ ವಿವಿಧ ನಗರಗಳಲ್ಲಿ ವಿಮಾನ  ನಿಲ್ದಾಣ ನಿರ್ಮಾಣ, ನಗರಗಳ ನವೀಕರಣ ಕೂಡ ಇದರಲ್ಲಿ ಸೇರಿತ್ತು.

ಆದರೆ ಈ ಯೋಜನೆಗಳು ಆರಂಭವಾಗುವ ಮೊದಲೇ ನೇಪಾಳದಲ್ಲಿ ನಡೆದ ವ್ಯಾಪಕ ರಾಜಕೀಯ ಬೆಳವಣಿಗೆಗಳಿಂದಾಗಿ ಕೆಪಿ ಶರ್ಮಾ ಒಲಿ ಅಧಿಕಾರಿದಿಂದ ಕೆಳಗಿಳಿದು, ಪ್ರಚಂಡ  ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಚಂಡ ಇದೀಗ ಭಾರತದೊಂದಿಗೆ ಸಂಬಂಧ ಉತ್ತಮಪಡಿಸಿಕೊಳ್ಳಲು ಮುಂದಾಗಿದ್ದು, ಇದರಿಂದ ನೇಪಾಳದಲ್ಲಿ ಚೀನಾ ಪ್ರಭಾವ ತುಸು  ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಧೇಸಿಗಳಿಗೆ ಪ್ರಧಾನಿ ಮೋದಿ ಸಾಥ್
ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜದ ಎಲ್ಲ ಸಮುದಾಯಗಳ ಆಶೋತ್ತರ ಈಡೇರಿಸುವ ಸಂವಿಧಾನವನ್ನು ನೇಪಾಳ ಅಸ್ತಿತ್ವಕ್ಕೆ  ತರುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಆ ಮೂಲಕ ನೇರವಾಗಿ ನೂತನ ಸಂವಿಧಾನ ವಿರೋಧಿಸಿ ವ್ಯಾಪಕ ಹೋರಾಟ ನಡೆಸಿದ್ದ ಮಧೇಸಿ ಸಮುದಾಯಕ್ಕೆ ತಮ್ಮ ಬೆಂಬಲ  ಸೂಚಿಸಿದರು. ಮಧೇಸಿ ಸಮುದಾಯ ಸೇರಿ ನೇಪಾಳದ ಎಲ್ಲ ಜನರ ಆಶೋತ್ತರಕ್ಕೆ ಅನುಗುಣವಾಗಿ ಸಂವಿಧಾನ ಜಾರಿಯಾಗಬೇಕು ಎಂದು ಮೋದಿ ಪರೋಕ್ಷವಾಗಿ ಅಭಿಪ್ರಾಯಪಟ್ಟಿದಾರೆ.  ನೇಪಾಳ ಆತ್ಮೀಯ ಮಿತ್ರನಾಗಿದ್ದು, ಶಾಂತಿ, ಸ್ಥಿರ ಹಾಗೂ ಸಮೃದ್ಧಿ ಎರಡೂ ರಾಷ್ಟ್ರಗಳ ಗುರಿಯಾಗಿದೆ. ಉಭಯ ದೇಶಗಳ ನಡುವೆ ಏರ್ಪಟ್ಟಿರುವ ಒಪ್ಪಂದ ಪ್ರಕಾರ ಯೋಜನೆಗಳನ್ನು ಸಮಯ  ಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮೋದಿ ಭರವಸೆ ನೀಡಿದರು.

ಕಳೆದ ವರ್ಷ ನೇಪಾಳ ರೂಪಿಸಿದ್ದ ಸಂವಿಧಾನಕ್ಕೆ ಅಲ್ಲಿನ ಭಾರತೀಯ ಮೂಲದ ಮಧೇಸಿ ಸಮುದಾಯವರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದು ಹಿಂಸಾಚಾರಕ್ಕೂ ಕಾರಣವಾಗಿ ಎರಡು  ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com