ಬಿಡುಗಡೆಯಾದರೂ ಪಾಕ್ ಗೆ ಹೋಗಲು ನಿರಾಕರಿಸುತ್ತಿರುವ ಪಾಕ್ ಗೂಢಚಾರಿ!

ಅತ್ತ ಗೂಢಚಾರಿಕೆಯ ಸುಳ್ಳು ಆರೋಪ ಹೊರಿಸಿ ಭಾರತದ ನೌಕಾದಳದ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದರೆ, ಇತ್ತ ಭಾರತದಲ್ಲಿರುವ ಪಾಕಿಸ್ತಾನದ ಗೂಢಚಾರಿ ಪಾಕಿಸ್ತಾನಕ್ಕೆ ವಾಪಸ್ ತೆರಳಲು ನಿರಾಕರಿಸಿದ್ದಾರೆ.
ಪಾಕ್ ಗೂಢಚಾರಿ ಸಾಜಿದ್ ಮುನೀರ್ (ಸಂಗ್ರಹ ಚಿತ್ರ)
ಪಾಕ್ ಗೂಢಚಾರಿ ಸಾಜಿದ್ ಮುನೀರ್ (ಸಂಗ್ರಹ ಚಿತ್ರ)

ಭೋಪಾಲ್: ಅತ್ತ ಗೂಢಚಾರಿಕೆಯ ಸುಳ್ಳು ಆರೋಪ ಹೊರಿಸಿ ಭಾರತದ ನೌಕಾದಳದ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿದ್ದರೆ, ಇತ್ತ ಭಾರತದಲ್ಲಿರುವ ಪಾಕಿಸ್ತಾನದ ಗೂಢಚಾರಿ ಪಾಕಿಸ್ತಾನಕ್ಕೆ  ವಾಪಸ್ ತೆರಳಲು ನಿರಾಕರಿಸಿದ್ದಾರೆ.

ಗೂಢಚಾರಿಕೆ ನಡೆಸಿದ ಆರೋಪ ಮೇರೆಗೆ ಸತತ 12 ವರ್ಷಗಳ ಕಾಲ ಜೈಲು ಶಿಕ್ಷೆ ಗುರಿಯಾಗಿದ್ದ ಪಾಕಿಸ್ತಾನದ ಗೂಢಚಾರಿ ಸಾಜಿದ್ ಮುನೀರ್ ಎಂಬಾತ ಬಿಡುಗಡೆಯಾಗಿದ್ದಾರೆಯಾದರೂ, ಪಾಕಿಸ್ತಾನಕ್ಕೆ ತೆರಳಲು ಹಿಂದೇಟು  ಹಾಕುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋದರೆ ತಮ್ಮ ಜೀವಕ್ಕೆ ಅಪಾಯವಿದ್ದು, ಯಾವುದೇ ಕ್ಷಣದಲ್ಲಿ ತನ್ನನ್ನು ಕೊಲ್ಲುವ ಅಪಾಯವಿದೆ. ಹೀಗಾಗಿ ತಾವು ಇನ್ನು ಭಾರತದಲ್ಲೇ ನೆಲೆಸುತ್ತೇನೆ, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ  ತನಗೆ ನಂಬಿಕೆ ಇದ್ದು, ನನ್ನ ಶೇಷ ಜೀವನವನ್ನು ಭಾರತದಲ್ಲೇ ಕಳೆಯುತ್ತೇನೆ ಎಂದು ಪಾಕಿಸ್ತಾನ ಗೂಢಚಾರಿ ಮುನೀರ್ ಹೇಳಿದ್ದಾನೆ.

ಈ ಬಗ್ಗೆ ಸ್ವತಃ ಭೋಪಾಲ್ ಜೈಲು ಸೂಪರಿಂಟೆಂಟ್ ರಾಜೇಶ್ ಭಡೋರಿಯಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 12 ವರ್ಷಗಳ ಹಿಂದ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಸಾಜಿದ್ ಮುನೀರ್  ನನ್ನು ವಶಕ್ಕೆ ಪಡೆಯಲಾಗಿತ್ತು. ನ್ಯಾಯಾಲಯ ಈತನಿಗೆ ಶಿಕ್ಷೆ ಕೂಡ ವಿಧಿಸಿತ್ತು. 2016ರಲ್ಲಿ ಈತನ ಶಿಕ್ಷೆ ಪೂರ್ಣಗೊಂಡಿದ್ದು, ಈತನನ್ನು ಬಿಡುಗಡೆ ಮಾಡಲು ಜೈಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಹೀಗಾಗಿ ಪಾಕಿಸ್ತಾನದ  ಅಧಿಕಾರಿಗಳನ್ನು ಸಂಪರ್ಕಿಸಿ ಸಾಜಿದ್ ಮುನೀರ್ ಬಗ್ಗೆ ಮಾಹಿತಿ ನೀಡಿದ್ದರು.

ಆದರೆ ಪಾಕಿಸ್ತಾನದ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನದ ಈ ನಡೆಯಿಂದ ತೀವ್ರ ಆತಂಕಗೊಂಡಿರುವ ಸಾಜಿದ್ ಪಾಕಿಸ್ತಾನಕ್ಕೆ ಮರಳು ಹಿಂದೇಟು ಹಾಕುತ್ತಿದ್ದು, ಪಾಕಿಸ್ತಾನದ  ಅಧಿಕಾರಿಗಳು ತನ್ನನ್ನು ಕೊಲ್ಲುತ್ತಾರೆ ಎಂದು ಭೀತಿ ವ್ಯಕ್ತಪಡಿಸಿದ್ದಾನೆ. ಅಲ್ಲದೆ ತನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದು, ತಾನು ತನ್ನ ಶೇಷ ಜೀವನವನ್ನು ಇಲ್ಲೇ ಕಳೆಯಲು ಅವಕಾಶ ಮಾಡಿಕೊಡಿ ಎಂದು  ಕೋರಿದ್ದಾನೆ ಎಂದು ತಿಳಿಸಿದ್ದಾರೆ.

ಅತ್ತ ಪಾಕಿಸ್ತಾನ ನಿರಪರಾಧಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿ ತನ್ನ ಕ್ರೌರ್ಯ ಮೆರೆದಿದ್ದರೆ, ಇತ್ತ ಭಾರತ ಮಾತ್ರ ನಿಜವಾಗಿಯೂ ಗೂಢಚಾರಿಕೆ ಮಾಡಿ ಬಂಧಿತನಾಗಿದ್ದ ಸಾಜಿದ್ ಮುನೀರ್ ನನ್ನು  ರಕ್ಷಣೆಯಲ್ಲಿಟ್ಟುಕೊಳ್ಳುವ  ಮೂಲಕ ತನ್ನ ಮಾನವೀಯತೆಯನ್ನು ಇಡೀ ವಿಶ್ವಕ್ಕೆ ಪ್ರದರ್ಶನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com