ನಾನು ಎಂಬ "ಅಹಂ"ಗೆ ಸೋಲು; ಉಪ ಚುನಾವಣೆ ಗೆಲುವಿನ ಕುರಿತು ಕಾಂಗ್ರೆಸ್ ಪ್ರತಿಕ್ರಿಯೆ

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶ ನಾನು ಎಂಬ ಅಹಂನ ವಿರುದ್ಧದ ಗೆಲುವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶ ನಾನು ಎಂಬ ಅಹಂನ ವಿರುದ್ಧದ ಗೆಲುವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಗುರುವಾರ ಪ್ರಕಟವಾದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ ಪರಮೇಶ್ವರ ಅವರು, ಕಾಂಗ್ರೆಸ್ ಪಕ್ಷದ ಸಾಮೂಹಿಕ  ನಾಯಕತ್ವಕ್ಕೆ ಸಂದ ಗೆಲುವಾಗಿದ್ದು, ಮತದಾರರಿಗೆ ಧನ್ಯವಾದ ತಿಳಿಸಿದರು. ಈ ಗೆಲವು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದಿದ್ದು, ಮುಂದಿನ ಚುನಾವಣೆಗೆ ಹುರುಪು ತಂದಿದೆ. ಕಾಂಗ್ರೆಸ್ ಸರ್ಕಾರದ ಜನಪರ ಕೆಲಸವನ್ನು ನೋಡಿ ಜನ ಮತ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಸಿಎಂ ಎಸ್‍ಎಂ ಕೃಷ್ಣ ಹಾಗೂ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ. ಜನ ಯಾವುದೇ ರೀತಿಯ ಬಣ್ಣದ ಮಾತುಗಳಿಗೆ ಸೋಲುವುದಿಲ್ಲ. ಜಾತಿ ಆಧಾರದ ಮೇಲೆ ಚುನಾವಣೆ ಗೆದ್ದಿಲ್ಲ. ಮುಂದೆ ಕೂಡ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮತದಾರರು ನಮ್ಮ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು, ಉಪ ಚುನಾವಣಾ ಫಲಿತಾಂಶ ನಾನು ಎಂಬ ಅಹಂನ ವಿರುದ್ಧದ ಗೆಲುವಾಗಿದೆ. ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅವರು ಪ್ರತಿಷ್ಟೆಯಿಂದ ಕಾಂಗ್ರೆಸ್  ತೊರೆದು ಸಿದ್ಧಾಂತಗಳನ್ನು ಬದಿಗೊತ್ತಿ ಬಿಜೆಪಿ ಸೇರಿದ್ದರು. ಇದೀಗ ಅವರ ನಾನು ಎಂಬ ಅಹಂಗೆ ಸೋಲಾಗಿದೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸಚಿವರಾದ ಎಚ ಅಂಜನೇಯ ಹಾಗೂ ರಮೇಶ್ ಕುಮಾರ್ ಅವರು ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸಗಳಿಗೆ ಜನರು ಮತನೀಡಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನ  ಮನ್ನಣೆ ನೀಡಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com