
ಬೆಂಗಳೂರು: ತಮಿಳು ನಟ ಸತ್ಯರಾಜ್ ತಮ್ಮ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ವಿಷಾಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾವು ತಮ್ಮ ಪ್ರತಿಭಟನೆಯನ್ನು ಕೈ ಬಿಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಶುಕ್ರವಾರ ಬಿಡುಗಡೆಯಾದ ಸತ್ಯರಾಜ್ ಅವರ ವಿಡಿಯೋವನ್ನು ನೋಡಿದ್ದೇನೆ. ಅವರು ತಮ್ಮ ಅವಹೇಳನಕಾರಿ ಹೇಳಿಕೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ. ವಿಷಾಧ ಮತ್ತು ಕ್ಷಮಾಪಣೆ ನಡುವೆ ಅಂತಹ ಅಂತರವೇನೂ ಇಲ್ಲ. ಕ್ಷಮೆಗೆ ವಿಷಾದ ಎಂಬ ಪದ ಬಳಕೆ ಇದೆ. ಇನ್ನು ಸತ್ಯರಾಜ್ ಅವರ ವಿರುದ್ಧ ನಮ್ಮ ವೈಯುಕ್ತಿಕ ಧ್ವೇಷವೇನೂ ಇಲ್ಲ. ಇದನ್ನು ಮುಂದೆ ಬೆಳೆಸಿಕೊಂಡು ಹೋಗುವ ಮನಸ್ಸೂ ಕೂಡ ನಮಗೆ ಇಲ್ಲ. ಹೀಗಾಗಿ ಸತ್ಯರಾಜ್ ಅವರ ವಿಷಾದವನ್ನು ನಾವು ಸ್ವೀಕರಿಸಿ ನಮ್ಮ ಪ್ರತಿಭಟನೆಯನ್ನು ಇಲ್ಲಿಗೇ ನಿಲ್ಲಿಸುತ್ತೇವೆ. ಅಂತೆಯೇ ಏಪ್ರಿಲ್ 28ರಂದು ಕರೆ ನೀಡಿದ್ದ ಕರ್ನಾಟಕ್ ಬಂದ್ ಅನ್ನೂ ಕೂಡ ವಾಪಸ್ ಪಡೆದಿದ್ದೇವೆ" ಎಂದು ವಾಟಾಳ್ ನಾಗರಾಜ್ ಹೇಳಿದರು.
ಅಂತೆಯೇ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ಸತ್ಯರಾಜ್ ಅವರಿಗೆ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್ ಅವರು, "ಕಾವೇರಿ ಇರಲಿ ಅಥವಾ ಮತ್ತಾವುದೇ ವಿಚಾರವಿರಲಿ ಕನ್ನಡಿಗರ ಬಗ್ಗೆ ಮಾತನಾಡುವಾಗ ಮೈಮೇಲೆ ಜ್ಞಾನವಿರಲಿ. ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುವುದು ಬೇಡ. ಮುಂದೆ ಇಂತಹ ಘಟನೆಗಳು ನಡದರೆ ಖಂಡಿತಾ ಸತ್ಯರಾಜ್ ಅವರ ಯಾವುದೇ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ಮಾಡಲಾಗುತ್ತದೆ" ಎಂಬ ಎಚ್ಚರಿಕೆ ನೀಡಿದರು.
Advertisement