ಶಶಿಕಲಾ ನೀಡಿರುವ ಬೆಂಬಲಿಗರ ಪಟ್ಟಿಯ ಸಹಿಗಳನ್ನು ಪರೀಕ್ಷೆ ನಡೆಸಬೇಕು ಎಂದ ರಾಜ್ಯಪಾಲರು

ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಮತ್ತು ಅವರ ಬೆಂಬಲಿಗರು ಸಲ್ಲಿಕೆ ಮಾಡಿರುವ ಬೆಂಬಲಿತ ಶಾಸಕರ ಪಟ್ಟಿಯಲ್ಲಿನ ಸಹಿಗಳನ್ನು ಪರೀಕ್ಷೆ ನಡೆಸುವದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ ಎದುರಾಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದ್ದು, ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಮತ್ತು ಅವರ ಬೆಂಬಲಿಗರು ಸಲ್ಲಿಕೆ  ಮಾಡಿರುವ ಬೆಂಬಲಿತ ಶಾಸಕರ ಪಟ್ಟಿಯಲ್ಲಿನ ಸಹಿಗಳನ್ನು ಪರೀಕ್ಷೆ ನಡೆಸುವದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಬಣ ಪ್ರತ್ಯೇಕವಾಗಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿ ತಮ್ಮ ತಮ್ಮ ಬೆಂಬಲಿತ ಶಾಸಕರ ಪಟ್ಟಿ ನೀಡಿ ಬಹುಮತ ಇದೆ ಎಂದು ಪ್ರತಿಪಾದಿಸಿಕೊಂಡಿದ್ದರು. ಹೀಗಾಗಿ  ಇಂದು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಉಭಯ ನಾಯಕರ ಪಟ್ಟಿಗಳನ್ನು ಪರಿಶೀಲಿಸಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದಾರೆ.

ಇನ್ನು ನಿನ್ನೆ ಸಂಜೆ ಸುಮಾರು 5 ಗಂಟೆ ವೇಳೆಗೆ ತಮಿಳುನಾಡು ರಾಜಭವನ ತಲುಪಿದ್ದ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದರು. ಈ ವೇಳೆ ತಮ್ಮ ಬೆಂಬಲಿತ ಶಾಸಕರ  ಪಟ್ಟಿಯನ್ನು ನೀಡಿದ ಅವರು ಈ ಹಿಂದೆ ತಾವು ಸಲ್ಲಿಕೆ ಮಾಡಿದ್ದ ರಾಜಿನಾಮೆಯನ್ನು ಹಿಂಪಡೆಯುವ ಕುರಿತೂ ಚರ್ಚೆ ನಡೆಸಿದ್ದರು. ಇದಲ್ಲದೆ ಶಶಿಕಲಾ ಅವರು ಬಲವಂತವಾಗಿ ಶಾಸಕರು ಮತ್ತು ಸಚಿವರಿಂದ ಖಾಲಿ ಹಾಳೆಗೆ ಸಹಿ  ಮಾಡಿಸಿಕೊಂಡಿದ್ದರು. ಹೀಗಾಗಿ ಅವರ ಶಾಸಕರ ಮತ್ತು ಸಚಿವರ ಸಹಿಗಳು ದುರುಪಯೋಗವಾಗುವ ಸಾಧ್ಯತೆ ಎಂದೂ ಮತ್ತು ಅವರ ಸಹಿಗಳು ನಕಲು ಮಾಡುವ ಸಾಧ್ಯತೆ ಇದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು  ತಿಳಿದುಬಂದಿದೆ. ಬಳಿಕ ಸಂಜೆ ಸುಮಾರು 7 ಗಂಟೆ ಹೊತ್ತಿಗೆ ರಾಜಭವನಕ್ಕೆ ಆಗಮಿಸಿದ ಶಶಿಕಲಾ ಅವರು ತಮ್ಮ ಬೆಂಬಲಿತ ಶಾಸಕರ ಪಟ್ಟಿಯನ್ನು ನೀಡಿ ತಮಗೇ ಬಹಮತವಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ.

ಐದು ದಿನದೊಳಗೆ ಬಹುಮತ ಸಾಬೀತು ಪಡಿಸುವಂತೆ ಪನ್ನೀರ್ ಸೆಲ್ವಂ ಗೆ ರಾಜ್ಯಪಾಲರ ಸೂಚನೆ, ವಿರೋಧ ವ್ಯಕ್ತಪಡಿಸಿದ ಶಶಿಕಲಾ
ಇದೇ ವೇಳೆ ರಾಜಭವನದ ಮೂಲಗಳು ತಿಳಿಸಿರುವಂತೆ ಮುಂದಿನ ಐದು ದಿನಗಳೊಳಗೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ತಮ್ಮ ಬಹುಮತ ಸಾಬೀತು ಪಡಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದರು. ಆದರೆ ಇದಕ್ಕೆ  ವಿಕೆ ಶಶಿಕಲಾ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಬಳಿ ಎಲ್ಲ 134 ಶಾಸಕರ ಸಹಿ ಸಹಿತ ಇರುವ ಬೆಂಬಲ ಪತ್ರವಿದೆ. ಹೀಗಾಗಿ ಸರ್ಕಾರ ರಚನೆಗೆ ತಮಗೇ ಅವಕಾಶ ನೀಡಬೇಕು, ವಿಳಂಬವಾದರೆ ಕುದುರೆ ವ್ಯಾಪಾರಾಗುವ ಸಾಧ್ಯತೆ  ಇದ್ದು, ಈಗಾಗಲೇ ಐದು ಮಂದಿ ಶಾಸಕರು ಪನ್ನೀರ್ ಸೆಲ್ವಂ ಬಣ ಸೇರಿದ್ದಾರೆ ಎಂದು ಶಶಿಕಲಾ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಹಿ ಪರೀಕ್ಷೆಗೆ ಸ್ಪೀಕರ್ ಗೆ ಸೂಚನೆ
ಇನ್ನು ಶಶಿಕಲಾ ಅವರು ಸಲ್ಲಿಕೆ ಮಾಡಿರುವ ಬೆಂಬಲಿಗ ಶಾಸಕರ ಸಹಿ ಪರೀಕ್ಷೆ ನಡೆಸುವಂತೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ತಮಿಳುನಾಡು ಸ್ಪೀಕರ್ ಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com