ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಮಿಳುನಾಡು: ವಿಶ್ವಾಸ ಮತ ಗೆದ್ದ ಸಿಎಂ ಪಳನಿ ಸ್ವಾಮಿ

ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ನಿರೀಕ್ಷೆಯಂತೆಯೇ ಸಿಎಂ ಪಳನಿ ಸ್ವಾಮಿ ವಿಶ್ವಾಸ ಮತ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ನಿರೀಕ್ಷೆಯಂತೆಯೇ ಸಿಎಂ ಪಳನಿ ಸ್ವಾಮಿ ವಿಶ್ವಾಸ ಮತ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆ 11 ಗಂಟೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ಕಲಾಪ ಆರಂಭವಾಯಿತು. ಬಳಿಕ ರಾಜ್ಯಪಾಲರ ಸೂಚನೆ ಮೇರೆಗೆ ಪಳನಿ ಸ್ವಾಮಿ ಅವರು ವಿಶ್ವಾಸ ಮತ ನಿರ್ಣಯ ಮಂಡನೆ ಮಾಡಿದರು. ಕೋಲಾಹಲದ ನಡುವೆಯೇ ಧ್ವನಿ ಮತದ ಮೂಲಕ ವಿಶ್ವಾಸ ಮತ ನಿರ್ಣಯ ಸಂಬಂಧ ಧ್ವನಿಮತದ ಮೂಲಕ ಮತ ಯಾಚನೆ ಮಾಡಲಾಯಿತು. ಈ ವೇಳೆ ಪಳನಿ ಸ್ವಾಮಿಗೆ 122 ಮತಗಳು ಲಭಿಸಿದರೆ, ಅವರ ವಿರುದ್ಧ ಕೇವಲ 11 ಮತಗಳು ಮಾತ್ರ ಬಿದ್ದಿವೆ ಎಂದು ತಿಳಿದುಬಂದಿದೆ.

ಇದೇ ವೇಳೆ ಗುಪ್ತ ಮತದಾನ ನಡೆಸುವಂತೆ ಬಿಗಿ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿ ಪಡಿಸಿದ್ದ ಡಿಎಂಕೆ ಶಾಸಕರನ್ನು ಸ್ಪೀಕರ್ ಧನಪಾಲ್ ಹೊರಗೆ ಹಾಕಿದ ಪ್ರಸಂಗ ನಡೆದಿದೆ. ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಸೇರಿದಂತೆ ಎಲ್ಲ ಶಾಸಕರನ್ನೂ ಮಾರ್ಷಲ್ ಗಳ ಮೂಲಕ ಕಲಾಪದಿಂದ ಹೊರಗೆ ಹಾಕಿಸಲಾಯಿತು. ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕರು ಮತದಾನ ಬಹಿಷ್ಕರಿಸಿದರೆ, ಪನ್ನೀರ್ ಸೆಲ್ವಂ ಬಣ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಮತ್ತು ಕೋಲಾಹಲದ ನಡುವೆಯೇ ಸ್ಪೀಕರ್ ಧ್ವನಿ ಮತದ ಮೂಲಕ ತಲೆ ಎಣಿಕೆ ಕಾರ್ಯ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಿದರು.

ಪ್ರತಿಪಕ್ಷಗಳಿಲ್ಲದೇ ಕಲಾಪ, ಧ್ವನಿ ಮತಕ್ಕೆ ಸೂಚನೆ ನೀಡಿದ ಸ್ಪೀಕರ್ ಧನಪಾಲ್
ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆಗೆ ಅಡ್ಡಿ ಪಡಿಸಿದ್ದ ಡಿಎಂಕೆ ಪಕ್ಷದ ಶಾಸರಕನ್ನು ಸದನದಿಂದ ಸ್ಪೀಕರ್ ಧನಪಾಲ್ ಅವರು ಉಚ್ಛಾಟನೆ ಮಾಡಿದ್ದು, ಡಿಎಂಕೆ ಶಾಸಕರಿಲ್ಲದೇ ವಿಶ್ವಾಸ ಮತ ನಿರ್ಣಯದ ಮತದಾನಕ್ಕೆ ಸೂಚನೆ ನೀಡಿದ್ದಾರೆ.

ಮಾರ್ಷಲ್ ಗಳ ಮೂಲಕ ಸದನದಲ್ಲಿದ್ದ ಡಿಎಂಕೆ ಶಾಸಕರನ್ನು ಬಲವಂತವಾಗಿ ಸ್ಪೀಕರ್ ಧನಪಾಲ್ ಅವರು ಹೊರಗೆ ಹಾಕಿಸಿದ್ದು, ಈ ವೇಳೆ ಭಾರಿ ಕೋಲಾಹಲವೇ ಉಂಟಾಗಿತ್ತು. ಮಾರ್ಷಲ್ ಗಳು ಮತ್ತು ಶಾಸಕರ ನಡುವೆ ತಳ್ಳಾಟ ಸಂಭವಿಸಿ ಬಹುತೇಕ ಶಾಸಕ ಶರ್ಟ್ ಮತ್ತು ಪಂಚೆಗಳು ಹರಿದು ಹೋದ ಘಟನೆ ಕೂಡ ಸಾಮಾನ್ಯವಾಗಿತ್ತು. ಸ್ವತಃ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹರಿದ ಶರ್ಟ್ ನಲ್ಲಿಯೇ ಮಾಧ್ಯಮಗಳನ್ನು ಕರೆದು ಪ್ರತಿಕ್ರಿಯೆ ನೀಡಿದ್ದು ವಸದನದಲ್ಲಿನ ಕೋಲಾಹಲಕ್ಕೆ ಹಿಡಿದ ಕನ್ನಡಿಯಾಗಿತ್ತು.

ಈ ವೇಳೆ ಮಾತನಾಡಿದ ಸ್ಟಾಲಿನ್ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಸದನದಲ್ಲಿ ನಡೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

30 ವರ್ಷಗಳ ನಂತರ ತಮಿಳುನಾಡಿನಲ್ಲಿ ವಿಶ್ವಾಸ ಮತ ಯಾಚನೆ

ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಬಳಿಕ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆದಿದ್ದು, ಈ ಹಿಂದೆ, ಅಂದರೆ 1988ರಲ್ಲಿ ಎಂಜಿಆರ್‌ ಸಾವಿನ ಬಳಿಕ ನಡೆದ ರಾಜಕೀಯ ಬಿಕ್ಕಟ್ಟು ಎಂಜಿಆರ್‌ ಅವರ ಪತ್ನಿ ಜಾನಕಿ ಅವರನ್ನು ಬಹುಮತ ಸಾಬೀತುಪಡಿಸುವಂತೆ ಮಾಡಿತ್ತು. ಸಭಾತ್ಯಾಗ, ಗದ್ದಲ, ಗೊಂದಲಗಳ ನಡುವೆ ಕೊನೆಗೂ ವಿಶ್ವಾಸಮತ ಗಳಿಸುವಲ್ಲಿ ಜಾನಕಿ ಅವರು ಯಶಸ್ವಿಯಾಗಿದ್ದರು. ಆದರೆ, ಇದಾದ ಎರಡೇ ದಿನಗಳಲ್ಲಿ ಅವರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಿತ್ತು. ಅಸೆಂಬ್ಲಿಯಲ್ಲಿ ನಡೆದ ಗದ್ದಲವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ವಜಾ ಮಾಡಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಆದೇಶ ಹೊರಡಿಸಿದ್ದರು.

Related Stories

No stories found.

Advertisement

X

Advertisement

X
Kannada Prabha
www.kannadaprabha.com