ಮತ್ತೆ ಕಲಾಪಕ್ಕೆ ಡಿಎಂಕೆ ಅಡ್ಡಿ, ಕಲಾಪ ಮಧ್ಯಾಹ್ನ 3ಕ್ಕೆ ಮುಂದೂಡಿಕೆ

ಗುಪ್ತಮತದಾನಕ್ಕೆ ಆಗ್ರಹಿಸಿ ಡಿಎಂಕೆ ನಡೆಸುತ್ತಿದ್ದ ಪ್ರತಿಭಟನೆ ಮಿತಮೀರಿದ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಡಿಎಂಕೆ ಶಾಸಕರನ್ನು ಹೊರಗಿಟ್ಟು ಮತದಾನ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ತ.ನಾಡು ವಿಧಾನಸಭೆಯಲ್ಲಿ ಭಾರೀ ಕೋಲಾಹಲ
ತ.ನಾಡು ವಿಧಾನಸಭೆಯಲ್ಲಿ ಭಾರೀ ಕೋಲಾಹಲ

ಚೆನ್ನೈ: ಗುಪ್ತಮತದಾನಕ್ಕೆ ಆಗ್ರಹಿಸಿ ಡಿಎಂಕೆ ನಡೆಸುತ್ತಿದ್ದ ಪ್ರತಿಭಟನೆ ಮಿತಮೀರಿದ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಡಿಎಂಕೆ ಶಾಸಕರನ್ನು ಹೊರಗಿಟ್ಟು ಮತದಾನ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ 1.10ಕ್ಕೆ ಮತ್ತೆ ಕಲಾಪ ಆರಂಭವಾದಾಗ ಡಿಎಂಕೆ ಶಾಸಕರು ಮತ್ತೆ ಗದ್ದಲವೆಬ್ಬಿಸಿದ ಕಾರಣ ಶಿಸ್ತುಕ್ರಮ ಕೈಗೊಂಡ ಸ್ಪೀಕರ್ ಧನಪಾಲ್ ಅವರು, ಮತದಾನ ಪ್ರಕ್ರಿಯೆಯಿಂದ ಡಿಎಂಕೆ ಶಾಸಕರನ್ನು ಹೊರ ಹಾಕಿದ್ದಾರೆ. ಅಲ್ಲದೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದು, 3 ಗಂಟೆಗೆ ಆರಂಭವಾಗುವ ಕಲಾಪದಲ್ಲಿ ಡಿಎಂಕೆ ಶಾಸಕರನ್ನು ಹೊರತು ಪಡಿಸಿ ಮತದಾನ ನಡೆಸಲು ಸ್ಪೀಕರ್ ಧನಪಾಲ್ ಸೂಚಿಸಿದ್ದಾರೆ.

ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದ್ದು, ಗುಪ್ತಮತದಾನಕ್ಕೆ ಆಗ್ರಹಿ ಡಿಎಂಕೆ ಶಾಸಕರು ನಡೆಸಿದ ಪ್ರತಿಭಟನೆ ತಾರಕಕ್ಕೇರಿದೆ.

ಸ್ಪೀಕರ್ ಧನಪಾಲ್ ಅವರು ಗುಪ್ತಮತದಾನಕ್ಕೆ ಅವಕಾಶ ನೀಡದೇ, ತಮ್ಮ ನಿರ್ಣಯವೇ ಅಂತಿಮ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡ ಡಿಎಂಕೆ ಶಾಸಕರು ಏಕಾಏಕಿ ಸ್ಪೀಕರ್ ಅವರತ್ತ ನುಗ್ಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ  ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದು, ಸ್ಪೀಕರ್ ಅವರ ಕುರ್ಚಿ ಮತ್ತು ಟೇಬಲ್ ಗಳನ್ನು ಧ್ವಂಸಗೊಳಿಸಿದ್ದಾರೆ. ಹೀಗಾಗಿ ಅನ್ಯ ಮಾರ್ಗವಿಲ್ಲದೇ ಸ್ಪೀಕರ್ ಧನಪಾಲ್ ಅವರು ಕಲಾಪವನ್ನು 1 ಗಂಟೆಗೆ ಮುಂದೂಡಿದ್ದಾರೆ.

ಇದಕ್ಕೂ ಮೊದಲು ನಡೆದ ವಿಶ್ವಾಸ ಮತ ನಿರ್ಣಯ ಸಂಬಂಧ ಚರ್ಚೆ ವೇಳೆಯೂ ಭಾರಿ ಕೋಲಾಹಲ ಉಂಟಾಗಿತ್ತು. ಡಿಎಂಕೆ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಶಾಸಕರು ಗುಪ್ತ ಮತದಾನ ನಡೆಸುವಂತೆ ಆಗ್ರಹಿಸಿದ್ದರು. ಅಂತೆಯೇ  ಪನ್ನೀರ್ ಸೆಲ್ವಂ ಬಣದ ಶಾಸಕರು ಕೂಡ ಗುಪ್ತಮತದಾನ ನಡೆಸಬೇಕು ಎಂದು ಕೋರಿದ್ದರು. ಆದರೆ ಶಾಸಕರ ಆಗ್ರಹಕ್ಕೆ ಮಣಿಯದ ಸ್ಪೀಕರ್ ಮತದಾನವನ್ನು ಹೇಗೆ ನಡೆಸಬೇಕು ಎಂಬುದ ನನ್ನ ವಿವೇಚನೆಗೆ ಬಿಟ್ಟ ವಿಚಾರ,  ಇದರಲ್ಲಿ ಯಾರೂ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಹೇಳಿದರು.

ಇದರಿಂದ ಡಿಎಂಕೆ ಶಾಸಕರು ಅಸಮಾಧಾನಗೊಂಡು ಪ್ರತಿಭಟನೆಗೆ ಇಳಿದರು. ಈ ವೇಳೆ ಸ್ಪೀಕರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

6 ಹಂತದಲ್ಲಿ ತಲೆ ಎಣಿಕೆ ಪ್ರಕ್ರಿಯೆ ಮೂಲಕ ಮತದಾನ
ಇನ್ನು ವಿಶ್ವಾಸ ಮತ ಯಾಚನೆಗೆ ಸಂಬಂಧಿಸಿದಂತೆ ಧ್ವನಿ ಮತದ ಮೂಲಕ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಒಟ್ಟು 6 ಹಂತಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಪೈಕಿ ಮೊದಲ ಹಂತದ ಮತ ಎಣಿಕೆ ಕಾರ್ಯ  ಮುಕ್ತಾಯವಾಗಿದ್ದು, ಸುಮಾರು 30 ಶಾಸಕರು ಪಳನಿ ಸ್ವಾಮಿ ಪರವಾಗಿ ಮತಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com