ಜಲ್ಲಿಕಟ್ಟು ರಕ್ಷಣೆಗೆ ತಮಿಳುನಾಡು ಸರ್ಕಾರದಿಂದ ಸುಗ್ರೀವಾಜ್ಞೆ: ಸಿಎಂ ಒ ಪನ್ನೀರ್ ಸೆಲ್ವಂ

ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ತಮಿಳುನಾಡು ಸರ್ಕಾರ ಪ್ರತಿಭಟನಾಕಾರರಿಗೆ ಸಿಹಿ ಸುದ್ದಿ ನೀಡಲು ತಯಾರಿ ನಡೆಸಿದೆ.
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ಮತ್ತು ದೆಹಲಿಯಲ್ಲಿ ಮಾತನಾಡಿದ ಸಿಎಂ ಪನ್ನೀರ್ ಸೆಲ್ವಂ
ಮರೀನಾ ಬೀಚ್ ನಲ್ಲಿ ಪ್ರತಿಭಟನೆ ಮತ್ತು ದೆಹಲಿಯಲ್ಲಿ ಮಾತನಾಡಿದ ಸಿಎಂ ಪನ್ನೀರ್ ಸೆಲ್ವಂ

ನವದೆಹಲಿ: ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ತಮಿಳುನಾಡು ಸರ್ಕಾರ ಪ್ರತಿಭಟನಾಕಾರರಿಗೆ ಸಿಹಿ ಸುದ್ದಿ ನೀಡಲು ತಯಾರಿ ನಡೆಸಿದೆ.

ಸುಪ್ರೀಂ ಕೋರ್ಟ್ ನಿಂದ ನಿಷೇಧಕ್ಕೊಳಗಾಗಿರುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ರಕ್ಷಣೆಗೆ ತಮಿಳುನಾಡು ಸರ್ಕಾರ ಧಾವಿಸಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪನ್ನೀರ್ ಸೆಲ್ವಂ ಅವರು ಬಳಿಕ ಎಜಿ  ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಿ ಕಾನೂನು ಸಲಹೆ ಪಡೆದಿದ್ದರು. ಈ ವೇಳೆ ರೋಹ್ಟಗಿ ಅವರು ಸಾಂಸ್ಕೃತಿಕ ರಕ್ಷಣೆ ರಾಜ್ಯ ಸರ್ಕಾರ ಇಚ್ಛಿಸಿದ್ದಲ್ಲಿ ಕಾನೂನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು. ಇದರ  ಆಧಾರದ ಮೇಲೆ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ರಕ್ಷಣೆಗೆ ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿ ಗೃಹ ಸಚಿವಾಲಯದ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.

ಈ ಬಗ್ಗೆ ಸ್ವತಃ ತಮಿಳುನಾಡು ಸಿಎಂ  ಪನ್ನೀರ್ ಸೆಲ್ವಂ ಅವರು ಹೇಳಿದ್ದು, ಇಂದು ಬೆಳಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಭೇಟಿಗಾಗಿ ನಿನ್ನೆ ದೆಹಲಿಗೆ ತೆರಳಿದ್ದ ಪನ್ನೀರ್ ಸೆಲ್ವಂ ಅವರು  ತಮಿಳುನಾಡಿಗೆ ವಾಪಸಾಗುವ ಮುನ್ನ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದರು. "ತಮಿಳುನಾಡು ಜನತೆಗೆ ಶೀಘ್ರದಲ್ಲೇ ಸಿಹಿ ಸುದ್ದಿ ಕಾದಿದೆ. ಜಲ್ಲಿಕಟ್ಟು ರಕ್ಷಣೆಗಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿ ಅನುಮೋದನೆಗಾಗಿ ಕೇಂದ್ರ  ಸರ್ಕಾರಕ್ಕೆ ರವಾನಿಸಿದ್ದೇವೆ. ಇನ್ನೆರಡು-ಮೂರು ಗಂಟೆಗಳಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಲಿದೆ. ಹೀಗಾಗಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬೇಕು. ಯಾವುದೇ ರೀತಿಯಲ್ಲೂ ಕಾನೂನು  ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com