ಕಂಬಳ ವಿವಾದ: 2 ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್

ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು 2 ವಾರ ಮುಂದೂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು 2 ವಾರ ಮುಂದೂಡಿದೆ.

ಕಂಬಳ ಕ್ರೀಡೆ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿಯವರು, ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

ಜಲ್ಲಿಕಟ್ಟು ವಿವಾದ ಸಂಬಂಧ ಸುಪ್ರೀಂಕೋರ್ಟ್ ಇನ್ನೂ ಆದೇಶವನ್ನು ಹೊರಡಿಸಿಲ್ಲ. ಜಲ್ಲಿಕಟ್ಟು ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬಳಿಕ ಕಂಬಳದ ಕುರಿತಂತೆ ಆದೇಶ ಹೊರಡಿಸಲಾಗುತ್ತದೆ. ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ನೀಡುವವರೆಗೂ ಕಾದುನೋಡುವಂತೆ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿಯವರು ತಿಳಿಸಿದ್ದಾರೆ.

ಜಲ್ಲಿಕಟ್ಟು ವಿವಾದ ಇತ್ಯರ್ಥಗೊಂಡ ಬಳಿಕ ಕಂಬಳದ ಕಹಳೆ ಕೂಡ ರಾಜ್ಯದಲ್ಲಿ ಮೊಳಗತೊಡಗಿತು. ಜಲ್ಲಿಕಟ್ಟುವಿನಂತೆಯೇ ಕಂಬಳ ನಡೆಸಲು ಅನುಮತಿ ನೀಡಬೇಕು, ಕಂಬಳದ ಮೇಲಿನ ನಿಷೇದ ತೆರವುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯದ ಹಲವು ಭಾಗಗಳಲ್ಲಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಕೂಡ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯದ ವಿವಿದೆಡೆಗಳಿಂದ ಜನರು ಆಗಮಿಸಿ ಕಂಬಳಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಕೂಡ ಕಂಬಂಳಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳದ ಕುರಿತಂತೆ ಮಾತನಾಡಿ, ನಾವು ಕಂಬಳದ ಪರವಾಗಿದ್ದೇವೆ. ಕಂಬಳ ಕರ್ನಾಟಕದ ಗ್ರಾಮೀಣ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಸರ್ಕಾರ ಅದರ ವಿರುದ್ಧವಾಗಿಲ್ಲ. ಅಗತ್ಯ ಬಿದ್ದರೆ ಕಂಬಳ ಕ್ರೀಡೆ ರಕ್ಷಿಸುವ ಕುರಿತು ಕಾನೂನು ರಚನೆಗೂ ಸಿದ್ಧ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com