
ನವದೆಹಲಿ: ಉತ್ತರ ಪ್ರದೇಶ ರಾಜಕೀಯ ಇತಿಹಾಸದಲ್ಲೇ ದ್ವಿತೀಯ ಎನ್ನಬಹುದಾದ ಅಪ್ರತಿಮ ಸಾಧನೆಯನ್ನು ಬಿಜೆಪಿ ಮಾಡಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅತೀ ಹೆಚ್ಚು ಸ್ಥಾನಗಳ ಗೆಲುವಿನ ದಾಖಲೆಯನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮುರಿದಿದೆ.
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಇತರೆ ಪಕ್ಷಗಳು ಸಂಪೂರ್ಣ ಧೂಳಿಪಟವಾಗಿದೆ. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ ಬರೊಬ್ಬರಿ 325 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಆಡಳಿತ ರೂಢ ಎಸ್ ಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಕೇವಲ 54 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನು ಈ ಭಾರಿಯಾದರೂ ಆಡಳಿತ ಹಿಡಿಯಬೇಕು ಎನ್ನುವ ಮಹದಾಸೆ ಹೊಂದಿದ್ದ ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷದ ಸಾಧನೆ ಕೇವಲ 19ಕ್ಕೆ ಸೀಮಿತವಾಗಿದೆ.
ಆ ಮೂಲಕ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಅದೂ ಕೂಡ ದಾಖಲೆ ಪ್ರಮಾಣದ ಸ್ಥಾನಗಳ ಮೂಲಕ. ಪ್ರಸಕ್ತ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉತ್ತರ ಪ್ರದೇಶದಲ್ಲಿ 325 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಉತ್ತರ ಪ್ರದೇಶ ಚುನಾವಣಾ ಇತಿಹಾಸದಲ್ಲೇ ರಾಜಕೀಯ ಪಕ್ಷವೊಂದು ಗಳಿಸಿದ 2ನೇ ಗರಿಷ್ಠ ಪ್ರಮಾಣದ ಗೆಲುವಾಗಿದೆ. ಈ ಹಿಂದೆ 1951ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 388 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ 1980ರಲ್ಲಿ ಮತ್ತೆ ಕಾಂಗ್ರೆಸ್ 309 ಸ್ಥಾನ ಗಳಿಸುವ ಮೂಲಕ ಅಧಿಕಾರಕ್ಕೇರಿತ್ತು. ಬಳಿಕ ನಡೆದ ಚುನಾವಣೆಗಳಲ್ಲಿ ಯಾವುದೇ ಪಕ್ಷಗಳೂ ಕೂಡ 300ರ ಗಡಿ ದಾಟಿರಲಿಲ್ಲ.
2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗಳಿಸಿದ್ದ 224 ಸ್ಥಾನಗಳೇ ರಾಜಕೀಯ ಪಕ್ಷವೊಂದರ ಅತ್ಯಧಿಕ ಗಳಿಕೆಯಾಗಿತ್ತು. ಆದರೆ ಇದೀಗ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಈ ದಾಖಲೆಗಳನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. 1991ರಲ್ಲಿ ಬಿಜೆಪಿ ಗಳಿಸಿದ್ದ 221 ಸ್ಥಾನಗಳೇ ಈವರೆಗಿನ ಅದರ ಗರಿಷ್ಠ ಕ್ಷೇತ್ರಗಳ ಗೆಲುವಿನ ದಾಖಲೆಯಾಗಿತ್ತು.
Advertisement