ಸಿಎಂ ಸಿದ್ದರಾಮಯ್ಯ ಅವರ 12ನೇ ಬಜೆಟ್ ಮಂಡನೆಗೆ ಕ್ಷಣಗಣನೆ!

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ತೀವ್ರ ಬರದ ನಡುವೆಯೇ ಮಂಡನೆಯಾಗುತ್ತಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ತೀವ್ರ ಬರದ ನಡುವೆಯೇ ಮಂಡನೆಯಾಗುತ್ತಿರುವ ಬಜೆಟ್  ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇಂದು ಬೆಳಗ್ಗೆ ವಿಧಾನಸೌಧದಲ್ಲಿ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದು, ಇದು ಅವರ 12ನೇ ಬಜೆಟ್ ಮಂಡನೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ಶುಕ್ರವಾರದ  ಬದಲಾಗಿ ಬುಧವಾರ ಬಜೆಟ್ ಮಂಡನೆ ಆಗುತ್ತಿದೆ. ಮಾರ್ಚ್17ರಂದು ಬಜೆಟ್​ ಗೆ ನಿರ್ಧರಿಸಲಾಗಿತ್ತಾದರೂ, ಯುಗಾದಿಯ ನಂತರದ 2 ದಿನ ಅಧಿವೇಶನ ನಡೆಸುವುದಕ್ಕೆ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಬುಧವಾರವೇ  ಬಜೆಟ್ ಮಂಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬಜೆಟ್ ನ ಗಾತ್ರ 2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ತೀವ್ರ ಬರ ಪರಿಸ್ಥಿತಿಯಿಂದಾಗಿ ರಾಜ್ಯದ ಕೃಷಿ ಕ್ಷೇತ್ರ ಹಿನ್ನಡೆ ಕಂಡಿದ್ದು, ಕೃಷಿ ಕ್ಷೇತ್ರ, ಆರ್ಥಿಕ ಹಿನ್ನಡೆ ಎದುರಿಸುತ್ತಿರುವ ಕೈಗಾರಿಕೆಗಳಿಗೆ ಉತ್ತೇಜನಕ್ಕೆ ಸಿಎಂ ಸಿದ್ದರಾಮಯ್ಯ ಎಂತಹ ಕ್ರಮಕೈಗೊಳ್ಳುತ್ತಾರೆ ಎಂಬುದು ಕುತೂಹಲ  ಹುಟ್ಟಿಸಿದೆ. ಇದೇ ವೇಳೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಪ್ರಮುಖವಾಗಿ ಇದೇ ತಿಂಗಳು ನಡೆಯಲಿರುವ 2 ಕ್ಷೇತ್ರಗಳ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು  ಸಿಎಂ ರೈತರಪರ ಬಜೆಟ್ ಮಂಡಿಸುವ ನಿರೀಕ್ಷೆಗಳು ಹೆಚ್ಚಾಗಿದೆ.

ಇನ್ನು ಕಳೆದ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮದ ಬಳಿಕ ಜನವರಿ ಅಂತ್ಯಕ್ಕೆ ಸ್ವಂತ ಸಂಪನ್ಮೂಲ ಸಂಗ್ರಹದಲ್ಲಿ ಕಡಿತವಾಗಿದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ  ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಅಂತೆಯೇ ಸರ್ಕಾರದ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯದಂತಹ ವಿವಿಧ ಯೋಜನೆಗಳಿಗೂ ಸಂಪನ್ಮೂಲ  ಕ್ರೋಢಿಕರಿಸುವ ಅನಿವಾರ್ಯತೆ ಕೂಡ ಸಿಎಂ ಸಿದ್ದರಾಮಯ್ಯ ಅವರ ಮೇಲಿದೆ.

ಒಂಬತ್ತು ದಿನವೂ ಪ್ರಶ್ನೋತ್ತರ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್‌ ಕೆ.ಬಿ. ಕೋಳಿವಾಡ್‌, ಬಜೆಟ್‌ ಮಂಡನೆ ಹೊರತುಪಡಿಸಿದರೆ ಒಂಬತ್ತು ದಿನಗಳ ಕಾಲ ಬಜೆಟ್‌ ಮೇಲಿನ ಚರ್ಚೆ ಜತೆಗೆ ಪ್ರಶ್ನೋತ್ತರಕ್ಕೂ ಅವಕಾಶ ಮಾಡಿಕೊಡಲಾಗಿದೆ. ಸದಸ್ಯರಿಂದ 2215 ಪ್ರಶ್ನೆ ಸ್ವೀಕರಿಸಲಾಗಿದೆ ಎಂದು ಹೇಳಿದರು. ಈ ಬಾರಿಯ ಅಧಿವೇಶನದಲ್ಲಿ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ಮಸೂದೆ‌, ರಾಜ್ಯ ಸಿವಿಲ್‌ ಸೇವೆಗಳ ಮಸೂದೆ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ಮಸೂದೆ ಹಾಗೂ ಅಂತರ್‌ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ ಮಸೂದೆಗಳು ಅಂಗೀಕಾರ ಪಡೆಯಬೇಕಿವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com