"ಕುಲಭೂಷಣ್ ಜಾಧವ್ ಬಿಡುಗಡೆಗೆ ಪ್ಲಾನ್ ಎ ನೊಂದಿಗೆ ಪ್ಲಾನ್ ಬಿ ಕೂಡ ಸಿದ್ಧವಿದೆ"

ಪಾಕಿಸ್ತಾನದ ವಶದಲ್ಲಿರುವ ಭಾರತದ ಕುಲಭೂಷಣ್ ಜಾದವ್ ಬಿಡುಗಡೆ ಪ್ಲಾನ್ ಎ ನೊಂದಿಗೆ ಪ್ಲಾನ್ ಬಿ ಕೂಡ ಸಿದ್ಧವಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರ ವಾದಮಂಡಿಸಿದ್ದ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತದ ಕುಲಭೂಷಣ್ ಜಾದವ್ ಬಿಡುಗಡೆ ಪ್ಲಾನ್ ಎ ನೊಂದಿಗೆ ಪ್ಲಾನ್ ಬಿ ಕೂಡ ಸಿದ್ಧವಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರ ವಾದಮಂಡಿಸಿದ್ದ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ನಿನ್ನೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಭಾರತದ ಪರ ನಿಲುವು ಪ್ರಕಟಿಸಿದ ಬೆನ್ನಲ್ಲೇ ಸುದ್ದಿ ಮಾಧ್ಯಮವೊಂದರೊಂದಿಗೆ ಮಾತನಾಡಿದ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರು, ಪ್ರಸ್ತುತ ನಾವು ಮೊದಲ  ಹಂತದ ಯುದ್ಧದಲ್ಲಿ ಮಾತ್ರ ಜಯಗಳಿಸಿದ್ದೇವೆ. ಇನ್ನೂ ಸಾಗಬೇಕಾದ ದಾರಿ ತುಂಬಾ ಇದೆ. ಮುಂದಿನ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್ ಜಾಧವ್ ಅಮಾಯಕತೆಯನ್ನು ತೋರಿಸುವ ವೇದಿಕೆಯಲ್ಲ. ಬದಲಿಗೆ ಆತನ ಪ್ರಕರಣದಲ್ಲಿ ಪಾಕಿಸ್ತಾನ ಸರ್ಕಾರ ನಡೆದುಕೊಂಡ ಕಾನೂನು ಬಾಹಿರ ನಡೆಯನ್ನು ತೋರಿಸಬೇಕಿದೆ.  ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ಇಟ್ಟ ಕೆಟ್ಟ ನಡೆಗಳನ್ನು ಮತ್ತು ಅಂತಾರಾಷ್ಟ್ರೀಯ ಕಾನೂನು ಪಾಲನೆಯ ವೈಫಲ್ಯವನ್ನು ತೋರಿಸಬೇಕಿದೆ. ಜಾದವ್ ಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದದ  ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಹರೀಶ್ ಸಾಳ್ವೆ ಹೇಳಿದ್ದಾರೆ.

ಅಂತೆಯೇ ಕುಲಭೂಷಣ್ ಜಾದವ್ ಅವರ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಪ್ಲಾನ್ ಎ ನೊಂದಿಗೆ ಪ್ಲಾನ್ ಬಿ ಕೂಡ ಸಿದ್ಧವಿದೆ. ಜಾದವ್ ಬಿಡುಗಡೆ ಸಂಬಂಧ ನಾವು ಸಕಾರಾತ್ಮಕವಾಗಿದ್ದೇವೆ ಎಂದು ಹರೀಶ್ ಸಾಳ್ವೆ  ಹೇಳಿದ್ದಾರೆ.

ದೇಶದ ಪ್ರಮುಖ ಖ್ಯಾತನಾಮ ವಕೀಲರಲ್ಲಿ ಹರೀಶ್ ಸಾಳ್ವೆ ಕೂಡ ಒಬ್ಬರಾಗಿದ್ದು, ಈ ಹಿಂದೆ ಕುಲಭೂಷಣ್ ಜಾದವ್ ಪ್ರಕರಣ ಸಂಬಂಧ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಲು ಹರೀಶ್ ಸಾಳ್ವೆ  ಕೇವಲ 1ರು. ಸಂಭಾವನೆ ಪಡೆಯುವ ಮೂಲಕ ದೇಶಾದ್ಯಂತ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಪ್ರಕರಣದ ವಿಚಾರಣೆಯನ್ನು ನೆದರ್ ಲ್ಯಾಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಸಲಾಗುತ್ತಿದ್ದು, ನ್ಯಾಯಾಲಯ ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com