ತಾಜ್ ಇನ್ನಷ್ಟು ಹತ್ತಿರ, ರಾತ್ರಿ ವೀಕ್ಷಣೆ, ಬೇಬಿ ಫೀಡಿಂಗ್ ಕೊಠಡಿ ವ್ಯವಸ್ಥೆ

ದೇಶದ ಪ್ರಮುಖ ಪ್ರವಾಸಿ ತಾಣ ಮತ್ತು ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಗೆ ಇನ್ನಷ್ಟು ಮೆರುಗು ತರಲಾಗಿದ್ದು, ಇನ್ನು ಮುಂದೆ ರಾತ್ರಿ ಪಾಳಿಯಲ್ಲೂ ತಾಜ್ ಮಹಲ್ ವೀಕ್ಷಣೆಗೆ ಲಭ್ಯವಾಗಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾತ್ರಿ ಪಾಳಿಯಲ್ಲಿ ತಾಜ್ ಮಹಲ್ ವೀಕ್ಷಣೆಗೆ ಅವಕಾಶ, ತಾಯಂದಿರಿಗಾಗಿ ಬೇಬಿ ಫೀಡಿಂಗ್ ರೂಂ

ಆಗ್ರಾ: ದೇಶದ ಪ್ರಮುಖ ಪ್ರವಾಸಿ ತಾಣ ಮತ್ತು ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಗೆ ಇನ್ನಷ್ಟು ಮೆರುಗು ತರಲಾಗಿದ್ದು, ಇನ್ನು ಮುಂದೆ ರಾತ್ರಿ ಪಾಳಿಯಲ್ಲೂ ತಾಜ್ ಮಹಲ್ ವೀಕ್ಷಣೆಗೆ ಲಭ್ಯವಾಗಲಿದೆ. 

ಹೌದು.. ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಇನ್ನು ಮುಂದೆ ಪ್ರವಾಸಿಗರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇಷ್ಟು ದಿನ ಬೆಳಗಿನಿಂದ ಸಂಜೆವರೆಗೂ ವೀಕ್ಷಣೆಗೆ ಲಭ್ಯವಿದ್ದ ಐತಿಹಾಸಿಕ ಕಟ್ಟಡ ಶೀಘ್ರದಲ್ಲಿ ರಾತ್ರಿ ವೇಳೆಯಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಈ ಕುರಿತಂತೆ ತಾಜ್ ಮಹಲ್ ಆಡಳಿತ ಮಂಡಳಿ ನಿರ್ಣಯಕೈಗೊಂಡಿದ್ದು, ರಾತ್ರಿ ವೇಳೆಯಲ್ಲೂ ತಾಜ್ ಮಹಲ್ ವೀಕ್ಷಣೆಗಾಗಿ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲಾಗುತ್ತಿದೆ.

ಈ ಸಂಬಂಧ ಮಾದ್ಯಮಗಳಿಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ಇಷ್ಟು ದಿನ ತಾಜ್ ಮಹಲ್ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ವೀಕ್ಷಣೆಗೆ ಲಭ್ಯವಿತ್ತು, ಇನ್ನು ಮುಂದೆ ರಾತ್ರಿ 9ರವರೆಗೂ ವೀಕ್ಷಣೆಗೆ ಲಭ್ಯವಿರಲಿದೆ. ಈ ಸಂಬಂಧ ಸಾಕಷ್ಟು ಪ್ರವಾಸಿಗರು ಮನವಿ ಮಾಡಿದ್ದರು. ಇನ್ನು ಐದು ದಿನಗಳಲ್ಲಿ ರಾತ್ರಿ ವೇಳೆ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ರಾತ್ರಿ ಪಾಳಿಯಲ್ಲಿ ಒಟ್ಟು 400 ಮಂದಿ ಪ್ರವಾಸಿಗರನ್ನು ಅನುವು ಮಾಡಲಾಗುತ್ತದೆ. ಅದೂ ಕೂಡ ಪ್ರತೀ ಬ್ಯಾಚ್ ಗೆ 50 ಮಂದಿಯಂತೆ ಒಟ್ಟು 8 ಬ್ಯಾಚ್ ಗಳಿಗೆ ವೀಕ್ಷಣೆಗೆ ಅನುವು ಮಾಡಿಕಡಲಾಗುತ್ತದೆ ಎಂದು ಹೇಳಿದರು.

ತಾಯಂದಿರಿಗಾಗಿ ಬೇಬಿ ಫೀಡಿಂಗ್ ರೂಂ
ಇನ್ನು ಪ್ರವಾಸಿಗರ ಬಹುದಿನಗಳ ಆಶಯದಂತೆ ತಾಜ್ ಮಹಲ್ ಆವರಣದಲ್ಲಿ ತಾಯಂದಿರಿಗಾಗಿ ವಿಶೇಷ ಕೊಠಡಿ ನಿರ್ಮಿಸಲಾಗುತ್ತಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ತಾಜ್ ಮಹಲ್ ಆವರಣದಲ್ಲಿ ಸ್ತನ್ಯಪಾನ ಕೋಣೆ(Baby feeding room)ಯನ್ನು ತಾಜ್ ಮಹಲ್ ಕ್ಯಾಂಪಸ್‌ನಲ್ಲಿ ಇಂದಿನಿಂದ ತೆರೆದಿದೆ.

ತಾಜ್ ಮಹಲ್‌ಗೆ ಪ್ರತಿದಿನ ಸರಾಸರಿ 22,000 ಪ್ರವಾಸಿಗರು ಭೇಟಿ ನೀಡುತ್ತಾರೆ. ತಾಜ್ ಮಹಲ್ ಭೇಟಿಗಾಗಿ ಮಕ್ಕಳೊಂದಿಗೆ(ಶಿಶು) ಬರುವ ತಾಯಂದಿರಿಗೆ ಅನುಕೂಲವಾಗುವಂತೆ ಗುರುವಾರ ರಿಂದ ಹವಾನಿಯಂತ್ರಿತ ಬೇಬಿ ಫೀಡಿಂಗ್ ರೂಂ ತೆರೆಯಲಾಗುವುದು ಎಂದು ತಾಜ್ ಮಹಲ್ ಆಡಳಿತ ವರ್ಗ ತಿಳಿಸಿದೆ. ಈ ವರ್ಷದ ಆರಂಭದಲ್ಲಿ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಇಲ್ಲಿ ಸ್ತನ್ಯಪಾನ ಕೋಣೆಯನ್ನು ತೆರೆಯುವುದಾಗಿ ಘೋಷಿಸಿದ್ದು, ಇದು ಮಹಿಳಾ ಪ್ರವಾಸಿಗರಿಗೆ ನೆಮ್ಮದಿ ನೀಡುತ್ತದೆ.

ತಾಜ್‌ಮಹಲ್ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ 12*12 ಅಡಿ ಕೋಣೆ ಇದಾಗಿದೆ ಎಂದು ಹೇಳಿದರು. ಈ ಕೋಣೆಯಲ್ಲಿ ಮಕ್ಕಳ ಡಯಾಪರ್ ಬದಲಾಯಿಸುವ ಟೇಬಲ್  ಮತ್ತು ರಬ್ಬರ್ ನೆಲಹಾಸನ್ನು ಹೊಂದಿದೆ. ಸೋಫಾ ಸೆಟ್ ಅನ್ನು ಮಗುವಿಗೆ ಫೀಡ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದರು. ಅಂತೆಯೇ ತಾಯಂದಿರಿಗೆ ಸಹಾಯ ಮಾಡಲು ಈ ಬೇಬಿ ಫೀಡಿಂಗ್ ರೂಂನಲ್ಲಿ ಮಹಿಳಾ ಉದ್ಯೋಗಿ ಇರುತ್ತಾರೆ. ಸ್ತನ್ಯಪಾನ ಮಾಡುವ ತಾಯಂದಿರಿಗೆ ಈ ಕೊಠಡಿಯಿಂದ ಖಾಸಗಿ ಸ್ಥಳ ಸಿಗುತ್ತದೆ, ಇದು ತಾಯಂದಿರಿಗೆ ಬಹಳ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com